ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ.

 ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ.  

ನಮಸ್ಕಾರ,

1. ತುಳುನಾಡಿನ ಜನರ ನಂಬಿಕೆಯ ಮೂರ್ತಿ

ತುಳುನಾಡಿನ ಜನರ ನಂಬಿಕೆಯ ಮೂರ್ತಿ ಕಲಿಯುಗದ ಸತ್ಯ  ಸ್ವಾಮಿ ಕೊರಗಜ್ಜ. ಸೋತು ಹೋಗಿರುವ  ಜೀವನದ ಓಟದಲ್ಲಿ ನೊಂದು ಬೆಂದು ಕುಸಿದಿರುವ ಹೃದಯದಲ್ಲಿ ನಮ್ಮ ಕೈ ಹಿಡಿದು ನಡೆಸುವ ಸತ್ಯ. "ಯಾರು ಇಲ್ಲ"... ಎಂಬ ಭಾವನೆ ಕಾಡುವಾಗ.... ನಿರಾಸೆಯ ಮೌನದಲ್ಲಿ ಕತ್ತಲಾದಾಗ "ನಾನು ನಿನ್ನೊಂದಿಗಿರುವೆನು" ಎಂಬ ನಂಬಿಕೆಯ ಬೆಳಕಿನ ಪಾಠ ಹೇಳುವ ಅಜ್ಜ. ಆತನ ಸ್ಮರಣೆ ಔಷಧ...ಆತನ ನುಡಿ ಸಾಂತ್ವನ...ಆತನ ಸಾನಿದ್ಯ ಶಕ್ತಿ... ತುಳುನಾಡಿನ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ. ಅಜ್ಜನಿಲ್ಲದೆ ತುಳುನಾಡು ಪೂರ್ತಿಯಾಗದು, ಜನರ ನಂಬಿಕೆ ಮತ್ತು ನಿತ್ಯ ಜೀವನದ ಭಾಗವೆಂದೇ ಹೇಳಬಹುದು. ತುಳುನಾಡಿನ ಜನರು ತಮ್ಮ ಅಗತ್ಯ ವಸ್ತುಗಳನ್ನು ಕಳೆದುಕೊಂಡಾಗ "ಸ್ವಾಮಿ ಕೊರಗಜ್ಜ" ಎಂದು ಅಜ್ಜನಿಗೆ ಪ್ರೀಯವಾದ ಶೇಂಧಿ, ಚಕ್ಕುಲಿ,ಹಾಗೂ ಬೀಡ ಕೊಡುವುದಾಗಿ ಹರಕೆ ಹೇಳುತ್ತಾರೆ. ಅಜ್ಜನ ಹಸ್ತ ನಮ್ಮ ತಲೆ ಮೇಲಿದೆ ಎಂಬ ಭರವಸೆಯು ಸದಾ ಜೀವಂತ .  ಕೊರಗಜ್ಜನ ಜೀವನ ಚರಿತ್ರೆಯ ಸಂಗತಿಗಳನ್ನು ತಿಳಿಯುವ ಮೂಲಕ ಅಜ್ಜನ ನಂಬಿಕೆಯ ಶಕ್ತಿಯನ್ನು ತಿಳಿಯಬಹುದು. 


2. ಕೊರಗತನಿಯ ಜನನ ಮತ್ತು ಬಾಲ್ಯಕಥೆ

 
ಏನ್ಸೂರು ಬರ್ಕೆ ಕೊರಗರ ಕೊಪ್ಪ ಎಂಬ ಪ್ರದೇಶದಲ್ಲಿ ಕೊರಗ ತನಿಯ ಜನಿಸುತ್ತಾನೆ. ತನಿಯನ ತಾಯಿ ಕೊರಪೋಲು ಮೈರೆ ಜಾತಿ ಸಮುದಾಯದವರೆಲ್ಲ ಸೇರಿ ಕೊರಗ ತನಿಯ ಎಂದು ಹೆಸರಿಡುತ್ತಾರೆ. ಈ ಕೊಪ್ಪ ಎಂಬ ಪ್ರದೇಶದಲ್ಲಿ ಮಾರಿಯಂತಹ ಮಾರಕ ರೋಗದಿಂದಾಗಿ ಮೇಲಿನ ಕೊಪ್ಪ ಕೆಳಗಿನ ಕೊಪ್ಪದ ಕೊರಗರೆಲ್ಲ ಅಳಿದು ಹೋಗಿ ತನಿಯ ಒಬ್ಬಂಟಿಯಾಗುತ್ತಾನೆ. ಕೊಪ್ಪಕ್ಕೆ ವಿದಾಯ ಹೇಳಿ ಬೆತ್ತಲೆಯಾಗಿ ಬಡಗು ದಿಕ್ಕಿಗೆ (ದಕ್ಷಿಣ ದಿಕ್ಕು) ಬಂದು ಕಲ್ಲಾಪು ಎಂಬ ಪ್ರದೇಶಕ್ಕೆ ಬಂದು ತಲುಪುತ್ತಾನೆ. ದಣಿದಿದ್ದ ತನಿಯ ಒಂದು ಮರದ ಅಡಿಯಲ್ಲಿ ಕುಳಿತು  ಮರಳನ್ನು ಅಕ್ಕಿ ಎಂದು ತಿಳಿದು... ದಡ್ಡಲು ಎಂಬ ಮರದ  ಪೇರಳೆಯಂತಹ ಹಣ್ಣನ್ನು ಕೊಯ್ಯುದು ತೆಂಗಿನ ಕಾಯಿ ಎಂದು ಭಾವಿಸಿ ಹೂಗಳನ್ನು ಅರ್ಪಿಸಿ... ನನಗೆ ದರಿ ತೋರಿಸು ದೇವರೇ...  ಎಂದು ಪ್ರಾರ್ಥಿಸುತ್ತಾನೆ. 

3. ಮೈರಕ್ಕ ಬೈದೆತಿ – ತಾಯಿಯಂತೆ ಅಳವಡಿಸಿಕೊಂಡ ಸಾಂತ್ವನ

ಆ ಸಂದರ್ಭದಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿದ ಮೈರಕ್ಕ ಬೈದೆತಿ ಮತ್ತು ಮಗ ಚೆನ್ನಯ್ಯ ಬೈದ, ಹಾಗೆಯೇ ಮಗಳು ಮಂಜಕ್ಕ ಬೈದೆತಿ ತನ್ನ ಕುಲಕಸುಬಾಗಿರುವಂತಹ  ಕಳ್ಳು, ಶೇಂಧಿ (ಕಲಿ) ಮಾರಾಟ ಮಾಡುವ ವೇಳೆ ಈ ಪುಟ್ಟ ಬಾಲಕ ಕಾಣುತ್ತಾನೆ, ತನಿಯ ಒಬ್ಬಂಟಿಯಾದ ಕಾರಣ ಒಮ್ಮೊಮ್ಮೆ ಅಳುವುದು, ಒಮ್ಮೊಮ್ಮೆ ನಗುತಿರುವ ಈ ವರ್ತನೆಯನ್ನು ಗಮನಿಸಿದ ಮೈರಕ್ಕ ಬೈದೆತಿ ಪ್ರೀತಿಯಿಂದ ಪುಟ್ಟ... ಬಾ ಇಲ್ಲಿ ಯಾರು ನೀನು..? ಎಂದು ಕೇಳುತ್ತಾಳೆ. ಆಗ ತನಿಯ ಪೊದೆಯೊಳಗೆ ಅವಿತುಕೊಂಡು ನನ್ನ ಮೈಯಲ್ಲಿ ಬಟ್ಟೆ ಇಲ್ಲವೆಂದಾಗ ಮೈರಕ್ಕ ಬೈದೆತಿ ತನ್ನ ತಲೆಯ ಮೇಲಿರುವ ಕಳ್ಳಿನ ಮಡಕೆಗೆ ಒತ್ತಿಗಿಟ್ಟಂತಹ ಬಟ್ಟೆಯನ್ನು ಕೊಡುತ್ತಾಳೆ.

ತನ್ನ ನೋವಿನ ಕಥೆಗಳೊಂದಿಗೆ ತಾನೊಬ್ಬ ಅನಾಥ ಬಾಲಕ ಎಂದು  ವಿವರಿಸುತ್ತಾನೆ. ಅದನ್ನು ಕೇಳಿ ಮೈರಕ್ಕ ಬೈದೆತಿ ಕರುಣೆಯಿಂದ "ಹಾಗಾದರೆ ನೀನು ನನ್ನೊಂದಿಗೆ ಬಾ",  ಎಂದು ಹೇಳುತ್ತಾಳೆ. ನಂತರ  ಮಗ ಚೆನ್ನಯನಗೆ "ನಾವು ತಂದಿರುವ ಊಟವನ್ನು ತನಿಯನಿಗೆ ಕೊಡು" ಎಂದು ಹೇಳುತ್ತಾಳೆ. ಊಟ ಮಾಡಲು ಹಾಲೆಯನ್ನು ಕೊಟ್ಟಗ,  ತನಿಯನು ಹಲೆಯ ಆಚೆ ಬದಿ ಈಚೆ ಬದಿಯನ್ನು ಕಟ್ಟಿ ಊಟ ಮಾಡುತ್ತಾನೆ. ಊಟ ಮುಗಿಸಿದ ನಂತರ ಹಾಲೆಯನ್ನು ತೊಳೆದು ಮಟ್ಟಲೆಯಾಗಿ ತಲೆಗಿಟ್ಟುಕೊಳ್ಳುತ್ತಾನೆ.  ಕಳ್ಳನ್ನು ಹೊತ್ತು ಮುಂದಕ್ಕೆ ಸಾಗುವ ವೇಳೆ ಮೈರಕ್ಕ ಬೈದೆತಿ ಹೇಳುತ್ತಾಳೆ, ನಿನಗೆ ನಾನು ಬಟ್ಟೆಯನ್ನು ಕೊಟ್ಟೆ ಆದರೆ ಈಗ ನನ್ನ ನೆತ್ತಿ ಬಾರಕ್ಕೆ ಸುಡುತ್ತಿದೆ ಎಂದೂ ಹೇಳುತ್ತಾಳೆ.

4. ತಲೆಒತ್ತಿನ ನೆರಿಗೆ – ಪವಾಡದ ಮೊದಲ ಗುರುತು

ತನಿಯ ನಗುತ್ತಾ  "ನೀವು ಸ್ವಲ್ಪ ನಿಲ್ಲಿ"  ಎಂದು ಕಾಡಿನ ಮಧ್ಯೆ ಹೋಗಿ ಬಿಳಿಯ ಉರ್ಕಿ ಎಂಬ ಬಳ್ಳಿಯ ಸಿಪ್ಪೆಯನ್ನು ತೆಗೆದು ನೆರಿಗೆ ಮಾಡಿ ತಂದು ಕೊಡುತ್ತಾನೆ. ಬಹಳ ಆಶ್ಚರ್ಯ..! ತಲೆಯ ಮೇಲೆ ಮಡಕೆಯ ಭಾರ ಇಲ್ಲದಂತೆ ಅನುಭವ ಎಂದು ಬಹಳ ಆರಾಮಾವಾಗಿ ಮಡಕೆಯನ್ನು ಹೊತ್ತು ಜೊತೆಯಾಗಿ ಮನೆಗೆ ಬರುತ್ತಾರೆ. ಹೀಗೆ ಪ್ರತೀ ದಿನ ತನಿಯ ಮಾಡಿ ಕೊಟ್ಟಂತಹ ತಲೆಒತ್ತಿನ ನೆರಿಗೆಯನ್ನೆ ಇಟ್ಟುಕೊಂಡು  ಮೈರಕ್ಕ ಕಳ್ಳು ಮಾರುತ್ತಳೆ. ತನಿಯ ಕೊಟ್ಟಂತಹ ತಲೆಒತ್ತಿನಿಂದಾಗಿ ಕಳ್ಳಿಗೆ ಬೇಡಿಕೆ ಹೆಚ್ಚಾಗಿ ಹೆಚ್ಚು ಹೆಚ್ಚು ಸಂಪಾದಿಸುವಂತಹ ಪವಾಡ ಸೃಷ್ಟಿಯಾಯಿತು. ಮೈರಕ್ಕ ಕದ್ರಿ ಮಂಜುನಾಥನಿಗೆ ಹರಕೆ ಹೇಳುತ್ತಾಳೆ.  ತನಿಯನು ನಗುತ್ತಾ... "ನೀವು ತಲೆ ಒತ್ತಿನ ನೆರಿಗೆಯನ್ನು ತೆಗೆಯಿರಿ" ಎಂದೂ ಹೇಳುತ್ತಾನೆ. ಹಾಗೆ ಮಾಡಿದಾಗ ಉಕ್ಕಿ ಹರಿಯುತ್ತಿದ್ದ ಕಳ್ಳು ಶಮನವಾಗುತ್ತದೆ. 

5. ಮೈರಕ್ಕನ ಮನೆಗೆ ಸಂತೋಷ ತಂದುಕೊಟ್ಟ ಅದ್ಭುತ ಬಾಲಕ

ಮೈರಕ್ಕ ತನಿಯನನ್ನ ತನ್ನ ಮಗನಂತೆ ಪ್ರೀತಿಯಿಂದ ಸಾಕುತ್ತಾಳೆ. ಒಂದು ದಿನ ಮಾಡಪತ್ತಿ ಮೈಸಂದಾಯ ಎಂಬ ಸನಿಧ್ಯದಲ್ಲಿ ವಿಶೇಷವಾದ ನಡವಳಿ ಇರುತ್ತದೆ. ಈ ಆಚರಣೆಯ ಪ್ರಕಾರ ಪ್ರತಿ ಮನೆಯಿಂದ ತೆಂಗಿನ ಸಿರಿ, ಸಿಯಾಳ, ಬಾಳೆ ಗೊನೆ ಕೊಡುವಂತಹ ಪದ್ದತಿ ಇತ್ತು. ಮೈರಕ್ಕ ಈ ಕಾರ್ಯಕ್ಕಾಗಿ ಒಕ್ಕಲಿನಲ್ಲಿರುವ 7 ಜನ ಆಳುಗಳನ್ನು ಕರೆಸಲು ತನಿಯನಿಗೆ ಹೇಳುತ್ತಾಳೆ. ಆದರೆ ಅಲ್ಲಿ ಕಳ ಜಾತಿ ಎಂದು ತನಿಯನನ್ನು ಅವಮಾನಿಸುತ್ತಾರೆ. ನಡೆದ ಘಟನೆಯನ್ನು ತಾಯಿ ಬಳಿ ಹೇಳಿದಾಗ ಮೈರಕ್ಕ ಬೈದೆತಿ ಬೇಸರಪಡುತ್ತಾಳೆ. ಆಗ ತನಿಯನು ಮುದ್ದಾಗಿ ನಗುತ್ತಾ... ಏಕೆ ಬೇಸರಪಡ್ತೀರಾ..? ನಾನಿಲ್ಲವೇ..?

ನಾನೊಬ್ಬನೇ ಎಲ್ಲವನ್ನು ಹೊರುತ್ತೇನೆ, ಆದರೆ ನಾನು ಹೊರಬೇಕಾದರೆ ನನ್ನ ಅಸೆಯನ್ನು ಪೂರೈಸಬೇಕು, ನೀವು ಏಳು ಅಳುಗಳಿಗೆ ನೀಡುವ ಊಟ ಕೊಟ್ಟು, ಏಳು ಆಳು ಕುಡಿಯುವ ಕಳ್ಳು ಹಾಗೂ 70 ಬಂಗುಡೆ ಮೀನನ್ನು ನೀಡಬೇಕು ಎನ್ನುತ್ತಾನೆ. ತಾಯಿಗೆ ಆಶ್ಚರ್ಯವಾಗುತ್ತದೆ...! ಎಲ್ಲವನ್ನು ಕೊಡುತ್ತಾಳೆ. ತಿನಿಸುಗಳನ್ನು ತಿಂದು ಮುಗಿಸಿ ಹೊರೆಯನ್ನು ನೆಲದಿಂದ ಎತ್ತಿ ಪಾದಕ್ಕೆ... ಪಾದದಿಂದ ಮೊಣಕಾಲಿಗೆ... ಮೊಣಕಾಲಿನಿಂದ ಹೆಗಲಿಗೆ... ಹೆಗಲಿನಿಂದ ತಲೆಗೆ ಇಡುತ್ತಾನೆ. ಎತ್ತಿ ತಿರುಗುವಾಗ ನಾನು ಹೋಗುತ್ತೇನೆ ಎಂದೂ ಹೇಳುತ್ತಾನೆ.  

6. ಮಾಡಪತ್ತಿ ಮೈಸಂದಾಯದ ಘಟನೆ – ಅವಮಾನದಿಂದ ಪಾವಿತ್ರ್ಯಕ್ಕೆ

ತಾಯಿ ಮೈರಕ್ಕನಿಗೆ ತುಂಬಾ ದುಃಖವಾಗುತ್ತದೆ. ಹೊರೆಯನ್ನು ಹೊತ್ತುಕೊಂಡು ಮಾಡಪತ್ತಿ ಮೈಸಂದಾಯ ಸಾನಿಧ್ಯಕ್ಕೆ ತಲುಪುತ್ತಾನೆ.  ಅಲ್ಲಿ ಅವನನ್ನು ತಡೆದು, "ಯಾರು ನೀನು"...? ಎಂದು ಪ್ರಶ್ನಿಸುತ್ತಾರೆ. ನೀನು ಬೈಲ ಬಾಕುಲನೋ..? ಒನಿತ್ತ ಮುಗೇರನೋ...?  ಎಂದು ಜಾತಿ ಹಾಗೂ ಕುಲದ ದೃಷ್ಟಿಯಿಂದ ಅವನನ್ನು ತೀರಾ ವಿಮರ್ಶಾತ್ಮಕವಾಗಿ ಪ್ರಶ್ನೆ ಮಾಡುತ್ತಾರೆ. "ನಾನು ಕೊರಗ ತನಿಯ" ಎಂದೂ ಹೇಳುತ್ತಾನೆ. "ನೀನು ತಂದ ಹೊರೆಯನ್ನು ಅಲ್ಲಿ ಹೊರಗಿಡು..!" ಎಂದು ಗದರಿದ ದ್ವನಿಯಲ್ಲಿ ಆಜ್ಞೆ ಮಾಡಿದರು.  ಇದರಿಂದ ಕೋಪಗೊಂಡ ತನಿಯನು ನಾನು ತಂದ ಹೊರೆ ಬೇಕು... ಆದರೆ ನಾನು ಬೇಡವಂತೆ! ಎಂದೂ ಹೊರಗಿನಿಂದ ಹೊರೆಯನ್ನು ಒಲಂಗಣದೊಳಗೆ ಎಸೆಯುತ್ತಾನೆ. 

7. ಕೊರಗತನಿಯ ಕ್ರೋಧ – ದೈವಶಕ್ತಿಗೆ ಪರಿವರ್ತನೆ

 ನಂತರ, ಅಲ್ಲಿಯೇ ಹತ್ತಿರದಲ್ಲಿದ್ದ “ಮಾಪಲ” ಹಣ್ಣಿನ ಮರವನ್ನು ಕಂಡ ತನಿಯ ತಾಯಿಗೆ ಹಣ್ಣು ತಂದು ಕೊಡಬೇಕೆಂದು ಮರವನ್ನು ಹತ್ತುತ್ತಾನೆ. ಅದರ ರೆಂಬೆಯೂ ದೇವಸ್ಥಾನದ ಕಳಶಕ್ಕೆ ಬಾಗಿತ್ತು. ಅದನ್ನು ಗಮನಿಸದ ತನಿಯ ತಪ್ಪಿ ಕಳಶದ ಮೇಲೆ ಕಾಲಿಡುತ್ತಾನೆ ಅದೇ ಕ್ಷಣದಲ್ಲಿ ತನಿಯ ಮಾಯವಾಗುತ್ತಾನೆ...! ಜನರ ಮದ್ಯೆ ಜೀವಂತ ವ್ಯಕ್ತಿಯಾಗಿದ್ದ ತನಿಯನು... ಶುದ್ದ ಶಕ್ತಿಯಾಗಿ ಪರಿವರ್ತನೆಗೊಂಡು ಕೊರಗಜ್ಜ ಎಂದು ತುಳುನಾಡಿಗೆ ಜೀವಂತ ಶಕ್ತಿಯಾಗಿ ಉಳಿದಿದ್ದಾನೆ. 

8. ನಂಬಿದವರನ್ನು ಕೈ ಬಿಡದ ದೈವ – ಜನಮನದ ಪ್ರೀತಿ

ಮಾಯವಾದ ತನಿಯ ಎಲ್ಲಾ ಪ್ರದೇಶವನ್ನು ಸುತ್ತಿ “ಕುತ್ತಾರು”ವಿಗೆ ಬಂದು ಅಧಿಕಾರ ಶಕ್ತಿಯಾಗಿದ್ದ ಪಂಜಾದಾಯ ದೈವದ ಅಭಯವನ್ನು ಪಡೆಯುತ್ತಾನೆ. ನಿನಗೆ ಕುತ್ತಾರುವಿನ ಏಳು ಕಡೆ ಕಲ್ಲು ಅಲ್ಲಿ ಮಾತ್ರ ನಿನಗೇ ಆರಾಧನೆ. ಬೇರೆಲ್ಲೂ ಕಲ್ಲು ಹಾಕಿ ನಂಬುವ ಕ್ರಮವಿಲ್ಲ ಎಂದೂ ಪಂಜಾದಾಯ ದೈವದ ಅಭಯವನ್ನು ಪಡೆಯುತ್ತಾನೆ. ಇಂದಿಗೂ ಕುತ್ತಾರು ಕೊರಗಜ್ಜನ ಆದಿಸ್ಥಳ ಆಗಿದೆ. ಅಲ್ಲಿ ದೀಪ ಇಲ್ಲದೆ ಇಂದಿಗೂ ಕೋಲಾ ನಡೆಯುತ್ತದೆ. ಇಲ್ಲಿ ನಾವು 7 ಸನಿದ್ಯಾವನ್ನು ಕಾಣಬಹುದು.  ಅದೇ ರೀತಿ ಹೆಚ್ಚಿನ ಕಡೆ ಕೊರಗಜ್ಜನ ಸನಿದ್ಯಾ ಕಾಣಬಹುದು. ಸಂಕ್ರಾಂತಿ ಸಂಕ್ರಾಂತಿ ಅಗೆಲು ಸೇವೆ ನಡೆಯುತ್ತದೆ. ಅಜ್ಜನಿಗೆ ಮಧ್ಯ, ಚಕ್ಕುಲಿ ,ಎಲೆ ಅಡಿಕೆಯನ್ನು ಹರಕೆಯಾಗಿ ಕೊಡುತ್ತಾರೆ.  ನಂಬಿದವರನ್ನು ಅಜ್ಜ ಎಂದಿಗೂ ಕೈ ಬಿಡುವುದಿಲ್ಲ.  


ನಮ್ಮ ಸಂಸ್ಕೃತಿ....ನಮ್ಮ ಹೆಮ್ಮೆ.  

ಜೈ ತುಳುನಾಡ್ 








Comments

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ