ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ
ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ
ನಮಸ್ಕಾರ,
1. ಆಟಿ ಅಮವಾಸ್ಯೆ – ಕಷ್ಟದ ತಿಂಗಳ ವಿಶೇಷತೆ
ತುಳುನಾಡು - ಮಣ್ಣಿನ ಮಡಿಲಲ್ಲಿ ಬೆಳೆದ ನಾಡು...ಇಲ್ಲಿನ ಭಾಷೆ, ಪರಂಪರೆ, ಈ ನಾಡಿನ ಜೀವಾಳ... ದೈವಾರಾಧನೆ ವೇಳೆ ದೈವ ನರ್ತಕನ ಸಂದೇಶದಲ್ಲಿ ಭಕ್ತರು ಹುಡುಕುವ ನಂಬಿಕೆಯ ಬೆಳಕು....ಕಂಬಳದ ಗದ್ದೆಯಲ್ಲಿ ಕೋಣಗಳ ಓಟ, ಕೃಷಿಕರ ಜೀವನಕ್ಕೆ ಸಲ್ಲಿಸುವ ಗೌರವದ ಕ್ರೀಡೆ... ನಾಗದೇವರ ಪುಣ್ಯ ಭೂಮಿಯಾಗಿ ಪ್ರಸಿದ್ದವಾದ, ಈ ತುಳುನಾಡು. ಇಲ್ಲಿ ನಡೆಯುವ ಆಚರಣೆಗಳು ಕೇವಲ ಧಾರ್ಮಿಕ ವಿಧಿವಿಧಾನಗಳು ಮಾತ್ರವಲ್ಲ, ಅವು ನಮ್ಮ ಹಿರಿಯರ ಬದುಕಿನ ಮೌಲ್ಯಗಳು ಹಾಗೂ ಜೀವನ ಪಾಠ, ಪ್ರಕೃತಿಗೆ ನೀಡುವ ಗೌರವದ ಸಂಕೇತ.
2. ತುಳುನಾಡಿನ ಸಂಸ್ಕ್ರತಿ – ಬದುಕಿನ ಪಾಠ
ಈ ನಾಡಿನಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಜನರ ನಿತ್ಯ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಅಂತಹ ಹಬ್ಬಗಳಲ್ಲಿ ಒಂದು ವಿಶೇಷ ಸ್ಥಾನ ಪಡೆದಿರುವುದು ಆಟಿ ಅಮವಾಸ್ಯೆ. ಇದು ತುಳುನಾಡಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಪ್ರಮುಖವಾದದ್ದು. ಈ ಹಬ್ಬವು ಜುಲೈ ತಿಂಗಳ ಸಂಕ್ರಮಣದ 16ರಂದು ಪ್ರಾರಂಭವಾಗಿ ಮುಂದಿನ ತಿಂಗಳ ಆಗಸ್ಟ್ 14 ರ, ಒಂದು ಸಂಕ್ರಮಣದಿಂದ ಇನ್ನೊಂದು ಸಂಕ್ರಮಣದವರೆಗೆ ಆಚರಿಸಲಾಗುತ್ತದೆ.
3. ಮನೆ ಶುದ್ಧೀಕರಣ – ಮನಸ್ಸಿನ ಶುದ್ಧೀಕರಣ
ಈ ತಿಂಗಳನ್ನು ಆಟಿ ಎಂದೇ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ಆಟಿ ತಿಂಗಳು ಜನರಿಗೆ ಬಹಳ ಕಷ್ಟದ ತಿಂಗಳಾಗಿತ್ತು. ಭಾರಿ ಮಳೆಯ ಪ್ರಭಾವದಿಂದಾಗಿ ಭತ್ತ ಬೇಸಾಯ, ಕೃಷಿಯಿಂದ ದೂರವಿರುತ್ತಿದ್ದರು. ಮಾಡಲು ಕೆಲಸವಿಲ್ಲದ ಕಾರಣ ಹಾಗೂ ಆರೋಗ್ಯದ ದೃಷ್ಠಿಯಿಂದ ಆಟಿಯಲ್ಲಿ ಹಲವಾರು ವಿಶೇಷ ಆಚರಣೆಗಳು, ಪದ್ಧತಿಗಳನ್ನು ಅಳವಡಿಸಿಕೊಂಡರು. "ಆಟಿ ಪಿದಯಿಪಾಡುನು" ಎಂಬ ಕ್ರಮವಿದೆ ಅಂದರೆ ತುಳುವಿನ ತಿಂಗಳ ಪ್ರಕಾರ ಪಗ್ಗುವಿನಿಂದ ಸುಗ್ಗಿಯವರೆಗೆ 12 ತಿಂಗಳ ಅಂತರವಿದೆ. ಹೀಗಾಗಿ ಮನೆಯನ್ನು ಶುದ್ಧಿಕರಿಸುವ ಕ್ರಮವಿದೆ. ಸದಸ್ಯರೆಲ್ಲರೂ ಸೇರಿ ಮನೆ ಶುದ್ಧಮಾಡಿದಾಗ, ಮನಸ್ಸು ಶುದ್ಧವಾಗುತ್ತದೆ ಎಂಬ ನಂಬಿಕೆ.
4. ಸಪ್ತಪರ್ಣಿ ಮರ – ಜೀವದಾಯಕ ಔಷಧಿ
ಪಾಲೆ ಮರ ಅಥವ ಸಪ್ತಪರ್ಣಿಯದ ಬಗ್ಗೆ ಆರ್ಯುವೇಧದಲ್ಲಿ ತುಂಬಾ ವರ್ಣನೆಗಳಿವೆ ಮತ್ತು ಔಷಧಿಯ ಗಣಿಯೆ ತುಂಬಿಕೊಂಡಿದೆ. ಆರ್ಯುವೇಧದಲ್ಲಿ ಈ ಮರದ ಹಲವಾರು ಭಾಗಗಳನ್ನು ಉಪಯೋಗಿಸಲಾಗುತ್ತದೆ. 1008ಕ್ಕೂ ಅಧಿಕ ಔಷಧೀಯ ಗುಣವನ್ನು ಹೊಂದಿದೆ. ಜ್ವರ, ಕ್ಯಾನ್ಸರ್, ಬ್ಯಾಕ್ಟೀರಿಯಾ ನಿರೋಧಕ ಶಕ್ತಿ, ಕಿಡ್ನಿ ಸಮಸ್ಯೆ, ಚರ್ಮ ರೋಗ ಪರಿಹರಿಸುವ ಶಕ್ತಿಯು ಇದೆ. ಆದರೆ ವರ್ಷಕ್ಕೆ ಒಮ್ಮೆ ಬರುವಂತಹ ಆಟಿ ಅಮವಾಸ್ಯೆ ಬಹಳ ವಿಶೇಷ. ಪೌರಾಣಿಕದಲ್ಲಿ ಈ ಆಟಿ ಅಮವಾಸ್ಯೆಯಂದು ಈ ಮರದ ತೊಗಟೆಯ ಮದ್ದನ್ನು ಬಲಿ ಚಕ್ರವರ್ತಿಯ ತಾಯಿಯೇ ತುಳುನಾಡಿನ ಜನರಿಗೆ ದಯಪಾಲಿಸಿದರೆಂಬ ಕಥೆಯಿದೆ. ಈ ಮರದ ತೊಗಟೆಯನ್ನು ಸೂರ್ಯೊದಯದ ಮೊದಲೆ ಹೋಗಿ ಕಲ್ಲಿನಲ್ಲಿ ಜಜ್ಜಿ ತಂದು ಕಷಯ ಮಾಡುವುದು ಕ್ರಮ, ಆದ್ದರಿಂದ ಮರದ ಗುರುತು ಬದಲಾಗದಂತೆ ಮೊದಲೇ ಎಚ್ಚರಿಕೆ ವಹಿಸಬೇಕು.
5. ತೊಗಟೆ ಕಷಾಯ – ಆರೋಗ್ಯದ ಶಕ್ತಿ
ಆಟಿ ಅಮವಾಸ್ಯೆಯ ಹಿಂದಿನ ದಿನದಂದು ಮರವನ್ನು ಗುರುತಿಸಿ, ಅದರ ಬುಡವನ್ನು ಸ್ವಚ್ಚಗೊಳಿಸಿ ಮರದ ಗುರುತಿಗೆ ಬೇಕಾಗಿ ಒಂದು ಬಾಳೆ ಬಳ್ಳಿಯನ್ನು ಕಟ್ಟಿ ಮರದ ಬುಡದಲ್ಲಿ ಕಲ್ಲನ್ನಿಟ್ಟು ಪ್ರಾರ್ಥನೆ ಮಾಡಬೇಕು. "ಹೇ ದಿವ್ಯ ಸಪ್ತಪರ್ಣಿ ಮರವೇ ನಿನ್ನಲ್ಲಿರುವ ಸಮಗ್ರ ಔಷಧಿಯಾ ಗುಣಗಳು ನಾಳೆ ತುಂಬಿರಲಿ ನಿನ್ನ ಮರದ ತೊಗಟೆಯನ್ನು ಪಡೆದ ನಾವು ಆರೋಗ್ಯಕರವಾಗಿರಲು ಅನುಗ್ರಹಿಸು" ಎಂದು ಮರುದಿನ ಬೆಳ್ಳಗ್ಗೆ ಸೂರ್ಯೊದಯದ ಮೊದಲೆ ಹೋಗಿ ಕಲ್ಲಿನಲ್ಲಿ ಜಜ್ಜಿ ತೊಗಟೆಯನ್ನು ಸಂಗ್ರಹಿಸಿ ಕಷಾಯವನ್ನು ಕುಡಿಯುವುದು ತುಳುನಾಡಿನ ಸಂಪ್ರದಾಯ.
6. ಕಷಾಯ ತಯಾರಿ
ತೊಗಟೆಯ ಮೇಲಿನ ಕಪ್ಪು ಭಾಗವನ್ನು ತೆಗೆದು ಬೆಳ್ಳಗಿನ ಭಾಗದಿಂದ ಕಷಯ ಮಾಡಲಾಗುತ್ತದೆ. ಒಂದು ಅಂಗೈಯಷ್ಟು ಅಗಲದ ತೊಗಟೆಗೆ 10-12 ಕಾಳುಮೆನಸು, ಒಂದು ಚಮಚ ಓಮ್ ಕಾಳು, ಬೆಳ್ಳುಳ್ಳಿ 3 ಎಸಳು, ಹಾಗೂ ನೀರು ಇವೆಲ್ಲ ಸೇರಿಸಿ ಈ ಕಷಯವನ್ನು ತಯಾರಿಸಲಾಗುತ್ತದೆ. ನಂತರ ಬೆಣಚ್ಚು ಕಲ್ಲನ್ನು ಸುಟ್ಟು ಈ ಕಷಾಯಕ್ಕೆ ಹಾಕುವುದು ಒಂದು ವಿಶೇಷ ಕ್ರಮ. ಈ ಕಷಾಯದ ಸೇವನೆಯೊಂದಿಗೆ ಹಲಸಿನಕಾಯಿ ಹಪ್ಪಳ, ಮತ್ತು ಗೇರು ಬೀಜವನ್ನು ಸುಟ್ಟು ತಿನ್ನುವುದು ರೂಡಿ. ಈ ಕಷಾಯವನ್ನು ಮಕ್ಕಳು 10ml ಹಾಗೂ ದೊಡ್ಡವರು 20ml ಸೇವಿಸಬಹುದು. ಈ ಕಷಾಯವು ದೇಹಕ್ಕೆ ಉಷ್ಣತೆಯ ಪರಿಣಾಮ ಮಂತ್ಯೆ ಗಂಜಿಯ ಊಟವನ್ನು ಮಾಡುತ್ತಾರೆ.
7. ಆಟಿ ತಮ್ಮನ – ಮಗಳ ತವರಿನ ಮಮತೆ
ಆಟಿ ಮಾಸದಲ್ಲಿ ಆಗಷ್ಟೆ ಕೆಲವು ದಿನಗಳ ಹಿಂದೆ ಮದುವೆಯಾದಂತಹ ಹೆಣ್ಣುಮಗಳು ತವರು ಮನೆಗೆ ಹೋಗುವ ಪದ್ದತಿ ಇದೆ, ಆಷಡಾ ಮಾಸದಲ್ಲಿ ಸೊಸೆಯನ್ನ ತವರು ಮನೆಗೆ ಕಳಿಸದಿದ್ದರೆ ಅತ್ತೆಯ ಕಣ್ಣು ಒಡಿಯುತ್ತೆ ಎಂಬ ತಮಾಷೆಯ ಮಾತಿದೆ. ತುಳುವಿನಲ್ಲಿ ಆಟಿ ತಮ್ಮನ ಎಂದು ಕರೆಯಲಾಗುತ್ತದೆ. ಪ್ರೀತಿಯ ಮಗಳನ್ನು ಸಾಕಿ ಬೆಳೆಸಿ ಅವಳ ಉತ್ತಮ ಭವಿಷ್ಯದ ಬಗ್ಗೆ ಕನಸು ಕಾಣುವ ತಂದೆ ತಾಯಿಗೆ ಚಿಂತೆ ಏನೆಂದರೆ ಈ ಆಟಿ ಮಾಸದ ಕಷ್ಟದ ಸಂದರ್ಭದಲ್ಲಿ ತನ್ನ ಮಗಳ ಬದುಕಿಗೆ ಹೊಟ್ಟೆಯ ಹಸಿವು, ಬಟ್ಟೆಯ ತೊಂದರೆ ಕಾಡುತ್ತಿದೆಯೇನೋ..? ಎಂಬ ಆತಂಕದ ತವರಿನ ಮನಸ್ಸಿಗೆ ಆಟಿ ತಮ್ಮನ ಎಂಬ ಪದ್ದತಿಯನ್ನು ಹಿಂದಿನ ಕಾಲದ ಹಿರಿಯರು ಅಳವಡಿಸಿಕೊಂಡರು. ಮಗಳು ತವರು ಮನೆಗೆ ಬಂದು ಆರೋಗ್ಯ ಆಹಾರ, ನೆಮ್ಮದಿ ಪಡೆದು ಹೊಸ ಶಕ್ತಿಯಿಂದ ಮುಂದೆ ಬದುಕನ್ನು ಸಾಗಿಸಲಿ ಎಂಬ ಮಮತೆಯ ಘಳಿಗೆ ಈ "ಆಟಿ ತಮ್ಮನ" ಪದ್ದತಿ
8. ಆಟಿಯ ರುಚಿಗಳು – ಮಳೆಗಾಲದ ಆಹಾರ ಸಂಪ್ರದಾಯ
ಈ ಆಟಿಯ ವಿವಿಧ ಬಗೆಯ ಆಹಾರದ ರುಚಿಯೇ ವಿಶೇಷ..! ಪತ್ರೋಡೆ, ತಜಂಕ್, ತೇವು, ನುರ್ಗೆ ಸೊಪ್ಪು, ತಿಮರೆ ಚಟ್ನಿ, ಕಳಲೆ ಪಲ್ಯ, ಮೆಂತ್ಯೆ ಗಂಜಿ, ಹಲಸಿನಹಣ್ಣು ಕಡುಬು, ಒಣ ಮೀನು ಚಟ್ನಿ. ಈ ಎಲ್ಲ ಆಹಾರ ಪದಾರ್ಥಗಳು ಮಳೆಗಾಲದಲ್ಲಿ ಶರೀರದ ತೇವಾಂಶ ಸಮತೋಲನ, ಶಕ್ತಿ ಮತ್ತು ಆರೋಗ್ಯ ಕಾಪಾಡಲು ವಿಶೆಷವಾಗಿ ಸಹಾಯವಾಗುತ್ತದೆ. ಆದರೆ ಈ ಆದೂನಿಕ ಕಾಲದಲ್ಲಿ ಕೆಲಸದ ಒತ್ತಡ, ಸಮಯದ ಕೊರತೆಯಿಂದಾಗಿ ಸಾಂಪ್ರದಾಯಿಕ ತಿನಿಸುಗಳು ಮರೆಯಾಗುತ್ತಿದೆ.
9. ಆಟಿಡ್ ಒಂಜಿ ದಿನ – ಹಳೆಯ ರುಚಿಯ ನೆನಪು
ಮೊದಲು ಅಜ್ಜಿ, ಅಮ್ಮ, ಹಿರಿಯರು ಶ್ರದ್ಧೆಯಿಂದ ತಯಾರಿಸುತ್ತಿದ್ದ ಈ ರೀತಿಯ ಆಹಾರಗಳು ಈಗ ತಯಾರಿಸುವ ಮನೆ ಕಡಿಮೆಯಾಗಿದೆ. ಹಳೆಯ ಋತುಚಕ್ರಕ್ಕೆ ತಕ್ಕಂತೆ, ಆರೋಗ್ಯದ ನಿಟ್ಟಿನಲ್ಲಿ ಉಂಟಾದ ಈ ಪಾಕಶಾಸ್ತ್ರ ಇಂದು ಕೆಲವು ಮನೆಯ ಅಂಗಳದಲ್ಲಿ ಮಾತ್ರ ಉಳಿದಿದೆ. ಆದ್ದರಿಂದ ಈ ಮರೆತ ಹಳೆಯ ರುಚಿಗಳನ್ನು ಮತ್ತೆ ನೆನಪಿಸಿಕೊಡುವ ಸಲುವಾಗಿ "ಆಟಿಡ್ ಒಂಜಿ ದಿನ" ಎಂಬ ವಿಶೇಷ ಖಾದ್ಯಗಳನ್ನು ಜನರಿಗೆ ಪರಿಚಯಿಸುತ್ತಾರೆ.
10. ಕೆಸರ್ಡ್ ಒಂಜಿ ದಿನ – ಮಣ್ಣು, ಮಳೆ, ಗದ್ದೆಯ ಹಬ್ಬ
ವಿಶೇಷವಾಗಿ, ತಮ್ಮ ತಮ್ಮ ಊರಿನಲ್ಲಿ "ಕೆಸರ್ಡ್ ಒಂಜಿ ದಿನ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹಳೆಯ ಕಾಲದ ವಸ್ತು ಪ್ರರ್ಶನ, ಔಷಧೀಯ ಗಿಡ ಮೂಳಿಕೆಗಳ ಪರಿಚಯ ಹಾಗೂ ಸ್ಥಳೀಯರಿಂದ ತುಳುನಾಡಿನ ಜಾನಪದ ಹಾಡು, ನೃತ್ಯ ಪ್ರದರ್ಶನಗಳು ನಡೆಯುತ್ತವೆ. ಈ ಕಲಾ ಸಂಭ್ರಮವು ಹಬ್ಬದ ಉತ್ಸವಕ್ಕೆ ಮತ್ತೊಂದು ಬಣ್ಣ ನೀಡುತ್ತದೆ. ಈ ದಿನದ ವಿಶೇಷವೇ ತುಂಬಿದ ನೀರಿನ ಕೆಸರಿನ ಗದ್ದೆಯಲ್ಲಿ ನಡೆಯುವ ವಿವಿಧ ಹಳ್ಳಿ ಆಟಗಳು, ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಕೆಸರಿನ ಗದ್ದೆಯಲ್ಲಿ ಕೂಡಿ ಆಟಗಳೊಂದಿಗೆ ಪಾಲ್ಗೊಂಡು ಸಂತಸದಲ್ಲಿ ಮುಳುಗುತ್ತಾರೆ. ಹೀಗಾಗಿ "ಕೆಸರ್ಡ್ ಒಂಜಿ ದಿನ" ಕೇವಲ ಆಟ -ಪಾಠದ ದಿನವಲ್ಲ, ಅದು ತುಳುನಾಡಿನ ಹಳ್ಳಿ ಬದುಕಿನ ಸೊಗಡನ್ನು ಮರುಜೀವಂತಗೊಳಿಸುವ ಹಬ್ಬ ಮಣ್ಣು, ಮಳೆ, ಗದ್ದೆ, ಗಾಯನ, ನೃತ್ಯ, ಆಟಗಳ ಜೀವಂತ ಸಂಸ್ಕ್ರತಿಯ ಉತ್ಸವ.
11. ಆಟಿ ಕಳಂಜ – ದುಷ್ಟಶಕ್ತಿಗಳನ್ನು ಓಡಿಸುವ ನಂಬಿಕೆ
11. ಆಟಿ ಕಳಂಜ – ದುಷ್ಟಶಕ್ತಿಗಳನ್ನು ಓಡಿಸುವ ನಂಬಿಕೆ
"ಆಟಿ ಕಳಂಜ" ತುಳುನಾಡಿನ ಒಂದು ವಿಶಿಷ್ಟ ಶ್ರೇಷ್ಠ ಆಚರಣೆ. ವಿಪರೀತ ಮಳೆಯ ಆಟಿ ತಿಂಗಳಲ್ಲಿ ಊರಿಗೆ ಅಂಟಿರುವ ಮಾರಿಯಂತಹ ದುಷ್ಟ ಶಕ್ತಿಗಳನ್ನು ಹೋಗಲಾಡಿಸುವ ನಂಬಿಕೆ ಜನರ ಮನದಲ್ಲಿ ಬೇರೂರಿದೆ ಹೀಗಾಗಿ ಆಟಿ ಕಳಂಜ ಆಚರಿಸಲಾಗುತ್ತದೆ. ಜನರ ಮನಸ್ಸಿಗೆ ದೈರ್ಯ, ಹಾಗೂ ವಿಶ್ವಾಸ ತುಂಬುವ ಸಂಪ್ರದಾಯ. ಈ ಸಂದರ್ಭ, ತುಳುನಾಡಿನ ನಲಿಕೆ ಜನಾಂಗದವರು ಕಳಂಜ ವೇಷದಲ್ಲಿ ಕುಣಿಯುತ್ತ ಮನೆ ಮನೆಗೆ ಭೇಟಿ ನೀಡುತ್ತಾರೆ. ಕಳಂಜ ಭೇಟಿ ನೀಡುವ ಮನೆಯಲ್ಲಿ ಅಕ್ಕಿ, ಎಲೆ ಅಡಿಕೆ, ತೆಂಗಿನ ಕಾಯಿ, ಹಾಗು ಹಣವನ್ನು ದಾನವಾಗಿ ಕೊಡುತ್ತಾರೆ.
12. ಪಿತೃಗಳಿಗೆ ಅರ್ಪಣೆ – ಆಟಿ ಅಗೆಲು ಸೇವೆ
ಈ ಆಟಿ ಮಾಸದ ಸಮಯದಲ್ಲಿ ಶುಭ ಸಮಾರಂಭದ ಆಚರಣೆಗಳು, ದೇವರ ಆರಾಧನೆ, ದೈವಾರಾಧನೆ ಇರುವುದಿಲ್ಲ. ಏಕೆಂದರೆ ಆಟಿ ಮಾಸ ಹಿರಿಯರಿಗೆ ಅರ್ಪಣೆ ನಮ್ಮನ್ನ ಅಗಲಿದಂತಹ ಹಿರಿಯರಿಗೆ ಆಟಿ ಅಗೆಲು ಸೇವೆ ನೀಡುವುದೇ ಈ ತಿಂಗಳ ವಿಶೇಷತೆ. ಹಿರಿಯರ ಆತ್ಮಗಳನ್ನು ನೆನಪಿಸಿಕೊಂಡು ಶ್ರದ್ದಾ, ಭಕ್ತಿಯಿಂದ ಅವರನ್ನು ಸಂತೋಷಿಸಲು 16 ಬಾಳೆ ಎಲೆಯ ಮೇಲೆ ಒಣ ಕೊಲ್ಲತರು ಚಟ್ನಿ , ಮೀನಿನ ಗಸಿ, ಕೋಳಿ ಸುಕ್ಕ ಹೀಗೆ ವಿಭಿನ್ನ ಆಹಾರಗಳನ್ನು ಕ್ರಮಬದ್ದವಾಗಿ ಸಮರ್ಪಿಸಲಾಗುತ್ತದೆ.
13. ಮುಂದಿನ ಪೀಳಿಗೆಗೆ ಸಂದೇಶ – ನಮ್ಮ ಹೊಣೆಗಾರಿಕೆ
13. ಮುಂದಿನ ಪೀಳಿಗೆಗೆ ಸಂದೇಶ – ನಮ್ಮ ಹೊಣೆಗಾರಿಕೆ
ಮಳೆಗಾಲದ ಹಸಿರಿನಲ್ಲಿ ನೆಲದ ಸುವಾಸನೆ ಬೆರೆತು, ಪಿತೃಗಳ ಸ್ಮರಣೆ, ಆರೋಗ್ಯಕರ ಆಹಾರ ಪದ್ದತಿ, ಪರಿಸರದ ಪ್ರೀತಿಯ ನಡುವೆಯೇ ಈ ಹಬ್ಬ ಬೆಳೆದಿದೆ. ಇಂದು ಕಾಲ ಬದಲಾಗಿ, ಬದುಕಿನ ವೇಗ ಹೆಚ್ಚಾಗಿದೆ. ಆದರೆ ಬದುಕಿನಲ್ಲಿ ನೆಲೆ ಕಾಣುವ ನಿಟ್ಟಿನಲ್ಲಿ ಅಜ್ಜಿ, ತಾತಂದಿರು, ಕಟ್ಟಿಕೊಟ್ಟ ಸಂಸ್ಕ್ರತಿ ಆಚರಣೆ, ಆರೋಗ್ಯ ಪೂರ್ಣ ಆಹಾರ ಪದ್ದತಿಗಳನ್ನು ಮರೆಯುವುದು, ನಮ್ಮ ಬದುಕಿಗೆ ತುಂಬಾ ದೊಡ್ಡ ನಷ್ಟವೇ ಸರಿ. ನಾವು ಬದುಕುತ್ತಿರುವ ಪ್ರಪಂಚದ ಬದಲಾವಣೆಯ ನಡುವೆ ಈ ಮಣ್ಣಿನ ಪರಂಪರೆ, ಸಂಸ್ಕ್ರತಿಯ ಪಾಠಗಳು ಮುಂದಿನ ಪೀಳಿಗೆಗೂ ಬೆಳಕು ನೀಡಲಿ. ಇದು ನಮ್ಮಿಂದ ಮುಂದಕ್ಕೆ ಸಾಗುವ ಸತ್ಯದ ಹೊಣೆಗಾರಿಕೆ.
ನಮ್ಮ ಸಂಸ್ಕ್ರತಿ...ನಮ್ಮ ಹೆಮ್ಮೆ
ಜೈ ತುಳುನಾಡ್









Super informative ❤️
ReplyDeleteThanks 🙏🏻
DeleteNice❤️
ReplyDeleteThanks 🙏🏻
DeleteJai tulunad❤️
ReplyDelete🙏🏻
Delete