"ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ"
"ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ"
ನಮಸ್ಕಾರ,
1. ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆ
ಯಕ್ಷಗಾನವು ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆಯೊಂದಾಗಿದೆ. ಇದು ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕುಂದಾಪುರ ಭಾಗಗಳಲ್ಲಿ ಹಿಚ್ಚಿನ ಪ್ರಸಿದ್ದಿಯನ್ನು ಪಡೆದಿದೆ. "ಯಕ್ಷ" ಎಂದರೆ ಪರಮಶಕ್ತಿಯ ಪ್ರತಿನಿಧಿ, ಗಾನ ಎಂದರೆ ಹಾಡು. ಈ ಕಲೆಯು ನಾಟಕ, ಸಂಗೀತ, ವೇಷಭೂಷಣ, ನೃತ್ಯ ಎಲ್ಲವೂ ಒಳಗೊಂಡಿರುವ ಒಂದು ಸಮಗ್ರ ಕಲಾರೂಪವಾಗಿದೆ. ಯಕ್ಷಗಾನವು ಸಾಮಾನ್ಯ ನಾಟಕವಲ್ಲ, ಇದು ಜನಸಾಮಾನ್ಯರ ಭಕ್ತಿ, ಭಾವನೆ, ಸಂಸ್ಕ್ರತಿ ಮತ್ತು ಮನರಂಜನೆಗಳ ಸಂಕಲನ. ಹಳ್ಳಿಗಳಲ್ಲಿ ದೇವರ ಜಾತ್ರೆ, ದೇಗುಲೋತ್ಸವ, ದೈವಾರಾಧನೆಗಳ ಸಮಯದಲ್ಲಿ ದಿನಪೂರ್ತಿ ನಡೆಯುವ ಯಕ್ಷಗಾನ ಪ್ರಸಂಗಗಳು ಗ್ರಾಮೀಣ ಸಮಾಜಕ್ಕೆ ಒಂದು ಮಹತ್ತರ ಸಾಂಸ್ಕ್ರತಿಕ ಹಬ್ಬವಾಗಿರುತ್ತವೆ. ಅದಕ್ಕಾಗಿ ಈ ಕಲೆಯನ್ನು "ಜೀವಂತ ನಾಟಕ" ಎಂದು ಹಲವರು ವರ್ಣಿಸುತ್ತಾರೆ.
ಮಹಿಷಾಸುರನ ವೇಷವು ಅತೀ ವೈಭವಶಾಲಿ, ದೊಡ್ಡ ಕಿರೀಟ, ಗಜಕೇಸರದಂತೆ ಭುಜಬಲ ಪ್ರದರ್ಶನ, ಗರಿಷ್ಠ ಆಭರಣಗಳಿಂದ ಕೂಡಿರುತ್ತದೆ. ಅವನ ವೇದಿಕೆಗೆ ಆಗಮನವು ಸಾಮಾನ್ಯವಾಗಿ ತಾಳಮದ್ದಳೆಯ ಘೋಷ, ಚಂಡೆಯ ಭರ್ಜರಿ ನಾದ, ಪಾತ್ರದಾರಿಯ ಗಂಭೀರ ಸಂಭಾಷಣೆ ಮತ್ತು ಭಯಾನಕ ನೃತ್ಯದೊಂದಿಗೆ ನಡೆಯುತ್ತದೆ. ಈ ದೃಶ್ಯವನ್ನು ನೋಡಲು ಜನರು ಮುಗಿ ಬಿದ್ದು ಸೇರುತ್ತಾರೆ. ವಿಶೇಷವಾಗಿ ಹಳ್ಳಿ ಜಾತ್ರೆಗಳಲ್ಲಿ "ಮಹಿಷಾಸುರನ ಆಗಮನ" ಪ್ರೇಕ್ಷಕರನ್ನು ಹಬ್ಬದ ಸಂಭ್ರಮಕ್ಕೆ ತರುತ್ತದೆ. ಇದಾದ ನಂತರ ಮಹಿಷಾಸುರ- ಚಾಮುಂಡಿ ಸಮರ ನಡೆಯುವ ಪ್ರಸಂಗ ಅತ್ಯಂತ ರೋಚಕವಾಗಿ ಸಾಗುತ್ತದೆ.
2. ಇತಿಹಾಸದ ನೋಟ
ಯಕ್ಷಗಾನದ ಇತಿಹಾಸವು ಸುಮಾರು 500 - 600 ವರ್ಷ ಹಿಂದಿನದು ಎಂದು ಹೇಳಲಾಗುತ್ತದೆ. ಪ್ರಾರಂಭದಲ್ಲಿ ಇದು ಭಕ್ತಿಗೀತೆಗಳು, ಪೌರಾಣಿಕ ಕಥೆಗಳ ಪಾಠ ಮತ್ತು ದೇವರ ಸೇವೆಯ ರೂಪವಾಗಿ ಪ್ರಾರಂಭವಾಯಿತು. ಹಳ್ಳಿ ದೇವರ ಜಾತ್ರೆ, ಹಬ್ಬಗಳಲ್ಲಿ ಇದನ್ನು ಜನರಿಗೆ ಮನರಂಜನೆ ಹಾಗೂ ಧಾರ್ಮಿಕ ಬೋಧನೆಗಾಗಿ ಪ್ರದರ್ಶಿಸಲಾಗುತ್ತಿತ್ತು. ಕ್ರಮೇಣ ಇದು ಒಂದು ಸಮಗ್ರ ಕಲೆಯಾಗಿ ಬೆಳೆಯಿತು. ಕೇರಳದ ಕಥಕಳಿ, ತಮಿಳುನಾಡಿನ ತೆರುಕೂತು, ಆಂದ್ರದ ಭಗವತಮೇಳಗಳಂತೆ ಕರ್ನಾಟಕದ ಜನಪದದ ಹೆಮ್ಮೆಯ ಕಲೆಯೇ ಯಕ್ಷಗಾನ.
ಯಕ್ಷಗಾನದಲ್ಲಿ ಸಂಗೀತದ ಹಿಮ್ಮೇಳ, ಹಾಗೂ ನೃತ್ಯದ ಮುಮ್ಮೇಳ ಮುಖ್ಯವಾದ ಅಂಶಗಳಾಗಿವೆ. ತಾಳ ಮದ್ದಳೆ, ಚಂಡೆ, ಭಜನೆ, ಭಾವಗೀತೆ ನೃತ್ಯದ ರಂಗಭೂಮಿ ಎಲ್ಲವೂ ಸೇರಿ ಸಂಪೂರ್ಣ ಕಲಾಮೇಳವಾಗುತ್ತದೆ. ಪಾತ್ರದಾರಿಗಳ ಆಕರ್ಷಕ ವೇಷಭೂಷಣ, ಶೃಂಗಾರಿಕ ಅಲಂಕಾರ, ನಾಟಕೀಯ ಸಂಭಾಷಣೆಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತವೆ. ಹಲವಾರು ಪೌರಾಣಿಕ ಕಥಾ ಪ್ರಸಂಗಗಳನ್ನು ಇದರ ಮೂಲಕ ನಿರೂಪಿಸುತ್ತಾರೆ. ಗ್ರಾಮೀಣ ಸಮಾಜದಲ್ಲಿ ದೇವರ ಪ್ರಸಾದವೆಂದು ಜನರು ಇದನ್ನು ನೋಡುತ್ತಾರೆ. ಹೀಗಾಗಿ ಯಕ್ಷಗಾನವು ಕೇವಲ ಕಲೆ ಅಲ್ಲ, ಅದು ಜನರ ನಂಬಿಕೆ ಸಂಸ್ಕೃತಿ, ಸಂಪ್ರಾದಾಯ ಮತ್ತು ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ.
3. ಯಕ್ಷಗಾನದ ಅಂಗಗಳು
1. ಹಿಮ್ಮೇಳ - ಮದ್ದಳೆ, ಚಂಡೆ, ಹಾರ್ಮೋನಿಯಂ, ಭಗವತ ಎಂಬ ಗಾಯಕರ ತಂಡ. ಇವರು ಪದ್ಯಗಳನ್ನು ಹಾಡಿ, ತಾಳಮದ್ದಳೆಯಿಂದ ನಾಟಕಕ್ಕೆ ಜೀವ ತುಂಬುತ್ತಾರೆ.
2. ಮುಗಿಯ, ಮುಮ್ಮೇಳ - ನಟರು, ಪಾತ್ರಧಾರಿಗಳು, ವೇಷ ತಾಳಿ, ಪದ್ಯಕ್ಕೆ ತಕ್ಕಂತೆ ನೃತ್ಯ, ಸಂಭಾಷಣೆ, ಕೃತ್ಯಗಳನ್ನು ತೋರಿಸುತ್ತಾರೆ.
3. ಪದ್ಯ - ಕಾವ್ಯದ ಪದ್ಯಗಳನ್ನು ಭಗವತನು ಹಾಡುತ್ತಾನೆ. ಅವುಗಳಲ್ಲಿ ಕಥೆಯ ಸಾರ, ನಾಟಕೀಯತೆ ಹಾಗೂ ಭಾವನೆಗಳು ತುಂಬಿರುತ್ತವೆ
4. ನೃತ್ಯ - ಪಾತ್ರಧಾರಿಗಳ ನೃತ್ಯ, ನಡಿಗೆ, ಭಾವಪ್ರಕಾಶನೆ - ಇವು ಪ್ರೇಕ್ಷಕರನ್ನು ಆಕರ್ಷಿಸುತ್ತವೆ.
5. ವೇಷಭೂಷಣ - ಅತೀ ವಿಶೇಷವಾಗಿರುವುದು ವೇಷ. ಬೃಹತ್ ಕಿರೀಟ, ಬಣ್ಣದ ಮುಖವರ್ಣನೆ, ಅಲಂಕಾರ - ಇದು ಯಕ್ಷಗಾನದ ವೈಶಿಷ್ಟ್ಯ
4. ಪೌರಾಣಿಕ ಹಿನ್ನೆಲೆ
ಯಕ್ಷಗಾನವು ಮುಖ್ಯವಾಗಿ ರಾಮಾಯಣ, ಮಹಾಭಾರತ, ಪುರಾಣಗಳನ್ನು ಬಂದ ಕಥೆಗಳ ಆಧಾರವನ್ನಾಗಿ ಮಾಡಿಕೊಂಡಿದೆ. ಉದಾಹರಣೆಗೆ - "ಶ್ರೀ ದೇವಿ ಮಹತ್ಮೆ", "ಅಭಿಮನ್ಯುವಿಮನ್ಯುವಿನ ವಧೆ", "ಸುಬದ್ರಾ ಕಲ್ಯಾಣ", "ಕರ್ಣಾರ್ಜುನ ಸಮರ", "ಬಲಿ ಚಕ್ರವರ್ತಿ", "ಪ್ರಹ್ಲಾದ" ಮುಂತಾದ ಪ್ರಸಿದ್ದ ಪ್ರಸಂಗಗಳು ಇವೆ. ಈ ಕಥೆಗಳ ಮೂಲಕ ಧರ್ಮ, ನೀತಿ, ಶೌರ್ಯ, ಭಕ್ತಿ ಇವುಗಳನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ.
5. ಯಕ್ಷಗಾನದ ಶೈಲಿಗಳು
ಯಕ್ಷಗಾನವು ಪ್ರದೇಶಿಕವಾಗಿ ಎರಡು ಪ್ರಮುಖ ಶೈಲಿಗಳಲ್ಲಿ ಕಂಡುಬರುತ್ತದೆ.
- ಬಡಗುತ್ತಿಟ್ಟು ಶೈಲಿ - ಉತ್ತರ ಕನ್ನಡ, ಹೊನ್ನಾವರ ಭಾಗಗಳಲ್ಲಿ ಹೆಚ್ಚು ಪ್ರಸಿದ್ದ. ಇಲ್ಲಿ ನೃತ್ಯಕ್ಕಿಂತ ವೇಷ ಹಾಗೂ ಸಂಭಾಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಾಳ ನಿಧಾನವಾಗಿರುತ್ತದೆ.
- ತೆಂಕುತ್ತಿಟ್ಟು ಶೈಲಿ - ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಕಂಡುಬರುವುದು. ಇಲ್ಲಿ ವೇಗದ ತಾಳ, ಚುರುಕಿನ ನೃತ್ಯ, ಉತ್ಸಹಭರಿತ ಚಂಡೆ- ಮದ್ದಳೆ ಪ್ರಧಾನ
6. ಯಕ್ಷಗಾನದಲ್ಲಿ ಪಾತ್ರಗಳು
- ನಾಯಕ - ಅರ್ಜುನ, ರಾಮ, ಕೃಷ್ಣ ಮುಂತಾದ ಧರ್ಮನಿಷ್ಠ ನಾಯಕರು
- ಖಳನಾಯಕ - ರಾವಣ, ದುರ್ಯೋಧನ, ಮುಂತಾದವರು
- ವಿದ್ಯಾವತಿ/ ಸ್ತೀವೇಷ - ದೇವಿ, ಮೋಹಿನಿ, ಸುಭದ್ರ ಮಹಿಳಾ ಪಾತ್ರವನ್ನು ಪುರುಷ ಕಲಾವಿದರು ನಿರ್ವಹಿಸುತ್ತಾರೆ.
- ಹಾಸ್ಯ - ಪ್ರೇಕ್ಷಕರಿಗೆ ನಗೆ ಉಂಟು ಮಾಡುವ ಪಾತ್ರ
- ಪರಮ ಶಕ್ತಿ - ದೇವಿಯ ಪಾತ್ರವು ಅದ್ಬುತ ಶಕ್ತಿಯ ಪ್ರತೀಕವಾಗಿರುರುತ್ತದೆ.
ಯಕ್ಷಗಾನವು ಕೇವಲ ಮನರಂಜನೆ ಮಾತ್ರವಲ್ಲ, ಜನಶಿಕ್ಷಣದ ಸಾಧನವೂ ಹೌದು. ಪೌರಾಣಿಕ ಕಥೆಗಳ ಮೂಲಕ ಸತ್ಯ - ಅಸತ್ಯ, ಧರ್ಮ - ಅಧರ್ಮ, ಸತ್ಪ್ರವೃತ್ತಿ- ಕುಪ್ರವೃತ್ತಿಗಳ ನಡುವಿನ ಭೇದವನ್ನು ತೋರಿಸಿ, ಜನರಲ್ಲಿ ನೈತಿಕ ಬೋಧನೆ ಮಾಡುತ್ತದೆ. ಗ್ರಾಮೀಣ ಸಮಾಜದಲ್ಲಿ ಯಕ್ಷಗಾನ ಜಾತ್ರೆಯ ಒಂದು ಅವಿಭಜ್ಯ ಅಂಗ. ದೇವರ ಸೇವೆ, ಹಬ್ಬ, ಹರಕೆ, ಮನೋರಂಜನೆ ಎಂಬಂತೆ ಇದು ಕಾರ್ಯನಿರ್ವಹಿಸುತ್ತದೆ.
8. ಯಕ್ಷಗಾನದ ಸವಾಲುಗಳು
- ಇತ್ತೀಚಿನ ಕಾಲದಲ್ಲಿ ಯಕ್ಷಗಾನವು ಹಲವು ಸವಾಲುಗಳನ್ನು ಎದುರಿಸುತ್ತಿದೆ.
- ಜನರ ರುಚಿಯಲ್ಲಿ ಬದಲಾವಣೆ
- ಕಾಲದ ಮಿತಿ
- ಟಿವಿ, ಸಿನಿಮಾ, ಸೋಶಿಯಲ್ ಮೀಡಿಯಾದ ಪ್ರಭಾವ
- ಕಲಾವಿದರಿಗೆ ಆರ್ಥಿಕ ತೊಂದರೆ
- ತಲೆಮಾರಿನ ಆಸಕ್ತಿ ಕಡಿಮೆ
ಆದರೂ ಕೆಲವು ಯಕ್ಷಗಾನ ಮಂಡಳಿಗಳು, ಕಲಾವಿದರು, ಅಭಿಮಾನಿಗಳು ಈ ಕಲೆ ಉಳಿಯಲು ಶ್ರಮಿಸುತ್ತಿದ್ದಾರೆ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳು, ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ
9. ಯಕ್ಷಗಾನದ ಭವಿಷ್ಯ
ಯಕ್ಷಗಾನವು ಕರ್ನಾಟಕದ ಸಾಂಸ್ಕ್ರತಿಕ ಗುರುತಿನ ಒಂದು ಪ್ರತೀಕ. ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಹೌದು. ಇಂದಿನ ತಲೆಮಾರಿಗೆ ಅಧುನಿಕ ತಂತ್ರಜ್ಙಾನ ಬಳಸಿಕೊಂಡು ಯಕ್ಷಗಾನದ
ಪ್ರಸಾರ ಮಾಡಬೇಕಾಗಿದೆ. ಶಾಲೆ, ಕಾಲೇಜುಗಳಲ್ಲಿ ಯಕ್ಷಗಾನ ಕಾಲಿಕಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. ಸರಕಾರ, ಸಮಾಜ, ಕಲಾವಿದರು ಒಂದಾಗಿ ಶ್ರಮಿಸಿದರೆ ಈ ಪೌರಾಣಿಕ ಕಲೆ ಶಾಶ್ವತವಾಗಿ ಬೆಳಗುತ್ತದೆ.
10. ಯಕ್ಷಗಾನ ಮೇಳದಲ್ಲಿ ವಿಶೇಷ ಸ್ಥಾನವನ್ನು ಪಡೆದ ಮಂಡಳಿ
ಶ್ರೀ ಬಪ್ಪನಾಡು ಮೇಳ
ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಗ್ರಾಮದ ಅಧ್ಯಾತ್ಮಿಕ ಕಿರಣದಿಂದ ಉದ್ಬವಿಸಿದ ಈ ಮೇಳವು ಹಲವು ದಶಕಗಳಿಂದ ಭಕ್ತಿ ಮತ್ತು ಕಲೆಯ ಸೇವೆಯನ್ನು ಮಾಡುತ್ತಿದೆ. ಈ ಮೇಳವು ವಿಶೇಷವಾಗಿ, ದೇವಿ ಮಹತ್ಮೆ, ಮಹಿಷಾಸುರನ ವರ್ಧನ, ರಾಮಾಯಣ ಹಾಗು ಮಹಾಭಾರತ, ಪ್ರಸಂಗಗಳನ್ನು ಅತ್ಯಂತ ವೈಭವದಿಂದ ಪ್ರದರ್ಶಿಸುದರಲ್ಲಿ ಪ್ರಸಿದ್ದಿ ಪಡೆದಿದೆ. ಬಪ್ಪನಾಡು ಮೇಳದ ವೈಶಿಷ್ಟ್ಯವೆಂದರೆ ಅದರ ಅದ್ಬುತ ವೇಷಭೂಷಣ, ಶಕ್ತಿಯುತ ಮದ್ದಳೆ, ಚಂಡೆಯ ನಾದ, ಬಾಗವತರ ಗಾನ, ಹಾಗೂ ಪಾತ್ರಧಾರಿಗಳ ನಾಟಕೀಯ ಅಭಿನಯ. ಇದು ಬಪ್ಪನಾಡು ಮೇಳವು ಕೇವಲ ಹಳ್ಳಿಗಳಲ್ಲದೆ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಹರಡುತ್ತಿದೆ. ಈ ಮೂಲಕ ಶ್ರೀ ಬಪ್ಪನಾಡು ಮೇಳವು ಯಕ್ಷಗಾನದ ಪರಂಪರೆಯನ್ನು ಕಾಪಾಡಿ ಹೊಸ ತಲೆಮಾರಿಗೆ ಕಲೆಯ ಪ್ರೇರಣೆಯಾಗಿದೆ.
ಶ್ರೀ ದೇವಿ ಮಹತ್ಮೆ- ಕಟೀಲು
ಕರಾವಳಿಯ ಯಕ್ಷಗಾನ ಮೇಳದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವುದು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆರಾಧನೆಗೆ ಸಂಬಂಧಿಸಿದ ಶ್ರೀ ದೇವಿ ಮಹತ್ಮೆ ಮೇಳ. ಇದು ಸಮಾರು 100 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿದೆ. ಈ ಮೇಳವು ದೇಶ- ವಿದೇಶಗಳಲ್ಲಿ ಯಕ್ಷಗಾನದ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವವನ್ನು ಹರಡುತ್ತಿರುವ ಪ್ರಮುಖ ಮೇಳವಾಗಿದೆ. ಕಟೀಲು ಮೇಳದ ವಿಶೇಷತೆ ಎಂದರೆ ಅದರ ಭಕ್ತಿಪರ ವೇಷಭೂಷಣ, ಬಾಗವತರ ಗಾನ, ಮದ್ದಳೆ- ಚಂಡೆಯ ಶಕ್ತಿಯುತ ನಾದ, ಹಾಗು ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ನಾಟಕೀಯ ಅಭಿನಯ. ವಿಶೇಷವಾಗಿ ದೇವಿ ಮಹತ್ಮೆಯ ಪ್ರಸಂಗಗಳು, ಮಹಿಷಾಸುರನ ವರ್ಧನ, ಚಂಡಿ ಮುನಿ ಸಂಹಾರ ಮುಂತಾದ ಕಥೆಗಳನ್ನು ಅತ್ಯಂತ ಭಾವಪೂರ್ಣವಾಗಿ ಪ್ರದರ್ಶಿಸಲಾಗುತ್ತದೆ.
ಈ ಮೇಳವು ಕೇವಲ ಕಲಾತ್ಮಕ ಪ್ರದರ್ಶನವಲ್ಲ, ಅದು ಕಟೀಲು ದೇವಿಯ ಭಕ್ತಿ ಸಂದೇಶವನ್ನು ಜನಮನಗಳಿಗೆ ತಲುಪಿಸುವ ಆಧ್ಯಾತ್ಮಿಕ ಮಾದ್ಯಮವಾಗಿದೆ. ಈಗಲೂ ಕಟೀಲು ಶ್ರೀ ದೇವಿ ಮಹತ್ಮೆ ಮೇಳವು ತನ್ನ ಶಿಸ್ತಿನ ಪ್ರದರ್ಶನ, ವೈಭವ ಶಾಲಿ ವೇಷ ಭೂಷಣ ಮತ್ತು ಭಕ್ತಿ ಸಂದೇಶಗಳಿದ ಜನಮನವನ್ನು ಸಂತೋಷಿಸುತ್ತದೆ.
ಸಮಾರೋಪ
ಯಕ್ಷಗಾನವು ಕೇವಲ ಒಂದು ಮನರಂಜನೆಯ ಕಲೆ ಅಲ್ಲ, ಅದು ಕರ್ನಾಟಕದ ಸಂಸ್ಕೃತಿಯ ಜೀವಾಳ. ಅದು ನಮ್ಮ ಜನಪದದ ವೈಭವ, ಪರಂಪರೆ ನಮ್ಮ ಅಸ್ತಿತ್ವವನ್ನು ಪ್ರತಿಬಿಂಬಿಸುವ ಈ ನೃತ್ಯ ನಾಟಕದ ಸಂಕೇತ. ಪೌರಾಣಿಕ ಕಥೆಗಳ ಮೂಲಕ ಮೌಲ್ಯಗಳನ್ನು ಬೋಧಿಸುವ ಜನರನ್ನು ಏಕೀಕರಿಸುವ, ಸಂತೋಷ ನೀಡುವ ಅತ್ಯಮೂಲ್ಯ ನೃತ್ಯ - ನಾಟಕ ಕಲೆಯೇ ಯಕ್ಷಗಾನ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದ ಉಳಿವಿಗಾಗಿ ಮನೆ ಮನೆಗಳಿಗೆ ಯಕ್ಷಗಾನ ಮಂಡಳಿಗಳು ತೆರಳಿ, ಆಕರ್ಷಕ ನೃತ್ಯದ ಮೂಲಕ ಮನೆಮಂದಿಯನ್ನು ರಂಜಿಸಿ ಸಂತೋಷಿಸಿ ಕೊನೆಯಲ್ಲಿ ದೇವರ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸುದರಿಂದ ಭಕ್ತಿ ಮತ್ತು ಮನರಂಜನೆಯ ಸಾರ್ಥಾಕ ಸಮನ್ವಯ ಸೃಷ್ಟಿಯಾಗುತ್ತಿದೆ.
ಹೀಗಾಗಿ ಯಕ್ಷಗಾನವು ಶಾಶ್ವತವಾಗಿ ಬದುಕಿರುವ ಜೀವಂತ ಕಲೆಯಾಗಿ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅಳಿಯದ ನಿದರ್ಶನವಾಗಿದೆ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಜೈ ತುಳುನಾಡ್













Nice❤️
ReplyDelete