"ಅಂಬರೀಶ ಋಷಿಯ ಆರಾಧನೆ, ಇಟಲ ಸೋಮನಾಥೇಶ್ವರ"

 "ಅಂಬರೀಶ ಋಷಿಯ ಆರಾಧನೆ, ಇಟಲ ಸೋಮನಾಥೇಶ್ವರ"

ನಮಸ್ಕಾರ,

ತುಳುನಾಡು ತನ್ನ ವೈವಿಧ್ಯಮಯ ಸಂಸ್ಕೃತಿ, ಆಹಾರ, ಜನಪದ ಪರಂಪರೆ ಮತ್ತು ದೇವಾಲಯಗಳಿಂದಲೇ ಪ್ರಸಿದ್ಧಿ ಹೊಂದಿದೆ. ಪ್ರತೀ ಬೆಟ್ಟದ ಹಿಂದೆ, ಪ್ರತೀ ನದಿಯ ತೀರದಲ್ಲಿ, ಪ್ರತೀ ಹಳ್ಳಿಯ ತುದಿಯಲ್ಲಿ ಯಾವದೋ ಒಂದು ಪುರಾತನ ದೇವಾಲಯವಿರುವುದು ತುಳುನಾಡಿನ ವೈಶಿಷ್ಟ್ಯ. ಇವುಗಳಲ್ಲಿ ಒಂದು ವಿಶಿಷ್ಟ ಆಧ್ಯಾತ್ಮಿಕ ತಾಣವೆಂದರೆ ಇಟಲ ಸೋಮನಾಥೇಶ್ವರ ದೇವಾಸ್ಥಾನ.

ಮಂಗಳೂರಿನಿಂದ ಸುಮಾರು 48 ಕಿ.ಮೀ., ಕಾರ್ಕಳದಿಂದ 23 ಕಿ.ಮೀ., ಮೂಡಬಿದ್ರೆಯಿಂದ ಕೇವಲ 16 ಕಿ.ಮೀ. ಹಾಗೂ ಬೆಂಗಳೂರಿನಿಂದ 389 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನ, ಪ್ರವಾಸಿಗರಿಗೂ, ಭಕ್ತರಿಗೂ ಸಮಾನವಾಗಿ ಆಕರ್ಷಣೆಯ ಕೇಂದ್ರವಾಗಿದೆ. ಈ ದೇವಾಲಯವನ್ನು ವಿಶಿಷ್ಟಗೊಳಿಸುವ ಅಂಶವೆಂದರೆ – ಸ್ವಪ್ರತಿಷ್ಠಿತ ಶಿವಲಿಂಗ, ನಿರಂತರ ಹರಿಯುವ ಜಲಧಾರೆ, ಅಗ್ನಿ ಗಣಪತಿ, ಎಂದಿಗೂ ಬತ್ತದ ನೀರಿನ ಕುಂಡಗಳು ಮತ್ತು ಪುರಾತನ ಪಾಂಡವ ಕುರುಹುಗಳು. ಈ ಎಲ್ಲಾ ಅಂಶಗಳು ಇಟಲ ಸೋಮನಾಥೇಶ್ವರನನ್ನು ಕೇವಲ ಒಂದು ದೇವಸ್ಥಾನವಲ್ಲದೆ, ಪೌರಾಣಿಕತೆ, ಭಕ್ತಿ , ಪ್ರಕೃತಿಗಳ ಸಂಗಮ ಸ್ಥಳವನ್ನಾಗಿ ರೂಪಿಸುತ್ತವೆ. 


ಅಂಬರೀಶ ಮಹರ್ಷಿ ಮತ್ತು ಸ್ವಪ್ರತಿಷ್ಠಿತ ಸೋಮನಾಥೇಶ್ವರ

ಇಟಲ ಸೋಮನಾಥೇಶ್ವರ ದೇಗುಲದ ಮೂಲ ಕಥೆ ಅಂಬರೀಶ ಮಹರ್ಷಿಯೊಂದಿಗೆ ಸಂಪರ್ಕ ಹೊಂದಿದೆ. ಅವರು ತಮ್ಮ ತಪಸ್ಸಿಗಾಗಿ ಯೋಗ್ಯವಾದ ಸ್ಥಳವನ್ನು ಹುಡುಕುತ್ತಾ ತುಳುನಾಡಿಗೆ ಬಂದರು. ಕಾಂತಾವರ ಎಂಬ ಪ್ರದೇಶವನ್ನು ತಪಸ್ಸಿಗೆ ಸೂಕ್ತವೆಂದು ಕಂಡು, ಗುಹೆಗಳನ್ನು ನಿರ್ಮಿಸಿ ದೀರ್ಘಕಾಲ ತಪಸ್ಸನ್ನು ಆಚರಿಸಿದರು. ಆದರೆ ತಪೋಭೂಮಿಯ ಪಾವಿತ್ರ್ಯಕ್ಕಾಗಿ, ಅಲ್ಲೊಂದು ಶಕ್ತಿಶಾಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಕನಸು ಹೊಂದಿದರು. ಹೀಗಾಗಿ ಅವರು ಕಾಶಿ ಕ್ಷೇತ್ರಕ್ಕೆ ತೆರಳಿ, ಜ್ಯೋತಿ ಸ್ವರೂಪದ ಶಿವಲಿಂಗವನ್ನು ಪಡೆಯುತ್ತಾರೆ. ಆ ಪವಿತ್ರ ಲಿಂಗವನ್ನು ಆನೆಯ ಮೇಲೆ ಹೊತ್ತುಕೊಂಡು ತುಳುನಾಡಿನತ್ತ ಪ್ರಯಾಣಿಸುತ್ತಿದ್ದರು.  

ಪ್ರಯಾಣದ ಮಧ್ಯದಲ್ಲಿ, ಮೂಜಿ ಮಲೆ (ತ್ರಿಕೂಟ ಪರ್ವತ) ತಲುಪಿದಾಗ ಸಂಧ್ಯಾ ಸಮಯವಾಗುತ್ತದೆ. ಸಂಧ್ಯಾವಂದನೆಗಾಗಿ, ಆನೆಯ ಮೇಲಿದ್ದ ಶಿವಲಿಂಗವನ್ನು ನೆಲಕ್ಕೆ ತಾಗದಂತೆ ಪಕ್ಕದಲ್ಲಿದ್ದ ಇಟ್ಟಿಲ ಎಲೆಯ ಮೇಲೆ ಇಡುತ್ತಾರೆ. ಮುಂದಿನ ದಿನ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಲಿಂಗವನ್ನು ಮೇಲಕ್ಕೆತ್ತಲು ಯತ್ನಿಸಿದಾಗ ಅದೊಂದು ಅದ್ಭುತ! – ಲಿಂಗವು ಸ್ವತಃ ಅಲ್ಲೇ ಸ್ಥಾಪನೆಯಾಗಿಬಿಟ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ ಅದನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ.


 ಅಚ್ಚರಿಗೊಳಗಾದ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದರು. ಆಗ ಪರಮೇಶ್ವರನು ದಿವ್ಯ ವಾಣಿಯಿಂದ ಹೇಳುತ್ತಾರೆ –  "ಈ ಲಿಂಗವು ಇಲ್ಲಿಯೇ ಪ್ರತಿಷ್ಠಾಪನೆಯಾಗಬೇಕಾಗಿದೆ. ನಿನ್ನ ದಿವ್ಯ ಹಸ್ತದಿಂದಲೇ ಇದರ ಪ್ರತಿಷ್ಠಾಪನೆ ನಡೆಯಲಿ. ನಿನ್ನ ಖ್ಯಾತಿ ಜಗತ್ತಿನಲ್ಲಿ ಪ್ರಸಿದ್ಧವಾಗಲಿ. ”ಹೀಗೆ ಇಟ್ಟಿಲ ಎಲೆಯ ಮೇಲೆ ಇಟ್ಟ ಲಿಂಗವೇ ಇಟಲ ಸೋಮನಾಥೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ಕಲ್ಲಾಗಿ ಮಾರ್ಪಟ್ಟ ಆನೆ – ಗಜಶಿಲೆಯ ಕಥೆ

ಅಂಬರೀಶ ಮಹರ್ಷಿ ಶಿವಲಿಂಗವನ್ನು ಎತ್ತಲು ಸಾಧ್ಯವಾಗದಾಗ, ಅವರು ತಂದಿದ್ದ ಆನೆಯ ಸಂಕೋಲೆಯನ್ನು ಲಿಂಗಕ್ಕೆ ಕಟ್ಟಿ ಬಲವಾಗಿ ಎಳೆಯಲು ಪ್ರಯತ್ನಿಸಿದರು. ಆದರೆ ಆ ಅದ್ಭುತ ಕ್ಷಣದಲ್ಲಿ ಆನೆಯೇ ಕಲ್ಲಾಗಿ ಮಾರ್ಪಟ್ಟಿತ್ತು. 


ಈ ಘಟನೆ ಭಕ್ತರ ಹೃದಯದಲ್ಲಿ ಇನ್ನೊಂದು ಪೌರಾಣಿಕ ನಂಬಿಕೆಯನ್ನು ಮೂಡಿಸಿತು. ಇಂದಿಗೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಆ ಕಲ್ಲಿನ ಆನೆಯ ಮೇಲೆ ದೇವರನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಗಜಶಿಲಾರೋಹಣ ಪೂಜೆ ನೋಡಲು ಸಾವಿರಾರು ಭಕ್ತರು ಕೂಡುತ್ತಾರೆ. 

ಅಗ್ನಿ ಗಣಪತಿ – ನೀರಿನ ಜಲಧಾರೆಯಲ್ಲಿ ನೆಲಸಿರುವ ವಿಗ್ರಹ

ಇಟಲ ದೇಗುಲದ ಮತ್ತೊಂದು ಅಪೂರ್ವ ವೈಶಿಷ್ಟ್ಯವೆಂದರೆ ಅಗ್ನಿ ಗಣಪತಿ. ಸಾಮಾನ್ಯ ಗಣಪತಿಯಂತೆ ಇಲ್ಲಿನ ವಿಗ್ರಹ ದೇವಸ್ಥಾನದ ಒಳಗಿಲ್ಲ; ಬದಲಾಗಿ, ಹರಿಯುವ ಜಲಧಾರೆಯ ಮಧ್ಯದಲ್ಲೇ ನೆಲಸಿದೆ.

ದಿನದ 24 ಗಂಟೆಗಳ ಕಾಲ ಪ್ರಕೃತಿಯ ತಾಯಿ ಈ ಗಣಪತಿಗೆ ನಿತ್ಯಾಭಿಷೇಕ ಮಾಡುತ್ತಿರುತ್ತಾಳೆ. ಇಂತಹ ಗಣಪತಿಯ ಸಾನಿಧ್ಯವನ್ನು ಬೇರೆಡೆ ಎಲ್ಲಿಯೂ ಕಾಣುವುದು ಅಪರೂಪ.


ಒಮ್ಮೆ ಋಷಿ-ಮುನಿಗಳ ಸಲಹೆಯ ಮೇರೆಗೆ, ಈ ಗಣಪತಿಯ ವಿಗ್ರಹವನ್ನು ಜಲಧಾರೆಯಿಂದ ಹೊರತೆಗೆದು ಗೋಪುರದೊಳಗೆ ಇಡಲಾಯಿತು. ಆದರೆ ಅದಾದ ನಂತರ ಪ್ರದೇಶವು ಭೀಕರ ಕ್ಷಾಮಕ್ಕೆ ಒಳಗಾಯಿತು – ಮಳೆಯ ಕೊರತೆ, ಕೀಟರೋಗ, ಬೆಳೆ ನಾಶ, ಜನಜೀವನ ಸಂಕಷ್ಟ… ಎಲ್ಲವೂ ಕಾಣಿಸಿಕೊಂಡಿತು.

ನಂತರ ಋಷಿಗಳು ಅರಿತುಕೊಂಡರು – ಇದು ಅಗ್ನಿ ಗಣಪತಿಯ ಪ್ರಕೋಪ. ತಕ್ಷಣವೇ ಮೂರ್ತಿಯನ್ನು ಮತ್ತೆ ತನ್ನ ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜೆ ಆರಂಭಿಸಿದರು. ಆಗಿನಿಂದಲೇ ಪ್ರದೇಶದಲ್ಲಿ ಸಮೃದ್ಧ ಮಳೆ, ಹಸನಾದ ಬೆಳೆ, ಸಮೃದ್ಧ ಜೀವನ ಕಂಡುಬಂದಿತು.

ಎಂದಿಗೂ ಬತ್ತದ ನೀರಿನ ಕುಂಡಗಳು

ದೇವಾಲಯದ ಗರ್ಭಗುಡಿಯ ಪಕ್ಕದಲ್ಲೇ ಒಂದು ಪವಿತ್ರ ನೀರಿನ ಕುಂಡವಿದೆ. ಇದರ ನೀರನ್ನು ದೇವರ ಅಭಿಷೇಕಕ್ಕೆ ಬಳಸುತ್ತಾರೆ. ಜೊತೆಗೆ ದೇವಾಲಯದ ಸುತ್ತಮುತ್ತ ಇನ್ನೂ ಎರಡು ಕುಂಡಗಳಿವೆ.


ಮೂರು ಕುಂಡಗಳಲ್ಲಿಯೂ ನೀರು ಎಂದಿಗೂ ಬತ್ತಿಲ್ಲ. ಬೇಸಿಗೆ, ಮಳೆ, ಹಿಮ – ಯಾವ ಋತುವಾದರೂ ಈ ತೀರ್ಥಗಳಲ್ಲಿ ನೀರು ಸದಾ ತುಂಬಿಕೊಂಡಿರುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಈ ನೀರನ್ನು ಕುಡಿಯುತ್ತಾರೆ.

ಸ್ಥಳೀಯ ನಂಬಿಕೆಯ ಪ್ರಕಾರ, “ಸೋಮನಾಥೇಶ್ವರನ ಸನ್ನಿಧಿಯಲ್ಲಿ ನೀರಿನ ಕೊರತೆ ಎಂದಿಗೂ ಇಲ್ಲ”. ಇದು ಪ್ರಕೃತಿಯ ಮಡಿಲಲ್ಲಿ ನೆಲಸಿರುವ ದೇವರ ಅನುಗ್ರಹವೆಂದು ಭಕ್ತರು ನಂಬುತ್ತಾರೆ.

ಜಾತ್ರಾ ಮಹೋತ್ಸವ ಮತ್ತು ಗಜಶಿಲಾರೋಹಣ

ಪ್ರತೀ ವರ್ಷದ ಜಾತ್ರಾ ಮಹೋತ್ಸವದಲ್ಲಿ ಇಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ರಥೋತ್ಸವ ಕಾಣಬಹುದು. ಆದರೆ ಇಟಲದಲ್ಲಿ ರಥೋತ್ಸವವಿಲ್ಲ.

ಇದಕ್ಕೆ ಕಾರಣವೇನೆಂದರೆ – ಶಿವಲಿಂಗವನ್ನು ಎಳೆಯಲು ಪ್ರಯತ್ನಿಸಿದ ಆನೆಯೇ ಕಲ್ಲಾಗಿ ಮಾರ್ಪಟ್ಟದ್ದು. ಹೀಗಾಗಿ ಪ್ರತೀ ವರ್ಷ ಆ ಕಲ್ಲಿನ ಆನೆಯ ಮೇಲಿರಿಸಿ ದೇವರನ್ನು ಪೂಜಿಸಲಾಗುತ್ತದೆ.


ಈ ಸಂದರ್ಭದಲ್ಲಿ ನಡೆಯುವ ಗಜಶಿಲಾರೋಹಣ ಪೂಜೆ ಕಣ್ಣಿಗೆ ಹಬ್ಬವಾಗುತ್ತದೆ. ನೂರಾರು ಭಕ್ತರು ಇದರ ದರ್ಶನಕ್ಕಾಗಿ ಬರುತ್ತಾರೆ. ಭಕ್ತಿಯ ಅಲೆ, ದೀಪಗಳ ಜ್ಯೋತಿ, ಘಂಟೆಯ ನಾದ – ಇವೆಲ್ಲ ಸೇರಿ ದಿವ್ಯ ವಾತಾವರಣವನ್ನು ಸೃಷ್ಟಿಸುತ್ತದೆ.

ಪಾಂಡವರ ಕುರುಹುಗಳು

ಸ್ಥಳೀಯ ಕಥನ ಪ್ರಕಾರ, ವನವಾಸದ ಸಮಯದಲ್ಲಿ ಪಾಂಡವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅವರು ಇಲ್ಲಿ ಪುಟ್ಟ ಆಲಯವನ್ನು ನಿರ್ಮಿಸಿದ್ದಾರೆ ಎಂಬ ಗುರುತುಗಳು ಬೆಟ್ಟದ ಬಳಿ ಕಾಣುತ್ತವೆ.


ಬೆಟ್ಟವನ್ನು ಏರೋದು ಸ್ವತಃ ಒಂದು ಸಾಹಸ. ಸುತ್ತಮುತ್ತಲಿನ ಹಸಿರು ಕಾಡು, ನೈಸರ್ಗಿಕ ಸೌಂದರ್ಯ ಪ್ರವಾಸಿಗರಿಗೆ ಸಂತೋಷವನ್ನು ನೀಡುತ್ತದೆ. ಧಾರ್ಮಿಕ ತೀರ್ಥಯಾತ್ರೆಯ ಜೊತೆಗೆ ಪ್ರಕೃತಿ ಸವಿಯುವ ಅವಕಾಶವೂ ಇಲ್ಲಿದೆ.

ಕುಣ್ಣರ ಮಾಗಣೆಯ ಪಣಪಿಲ ಅರಮನೆಯ ಪಟ್ಟದ ದೇವರು

ಇಟಲ ಸೋಮನಾಥೇಶ್ವರನು ಕೇವಲ ಒಂದು ದೇವಸ್ಥಾನಕ್ಕೆ ಸೀಮಿತವಲ್ಲ. ಅವರು 9 ಗ್ರಾಮಗಳ ಗ್ರಾಮದೇವರು ಆಗಿದ್ದಾರೆ. ಜನಮನದಲ್ಲಿ ಮಹತೋಭರ ಸ್ಥಾನ ಪಡೆದಿದ್ದಾರೆ.


ಇದೇ ದೇವರು ಕುಣ್ಣರ ಮಾಗಣೆಯ ಪಣಪಿಲ ಅರಮನೆಯ ಪಟ್ಟದ ದೇವರು. ಜೊತೆಗೆ ಈ ದೇವಸ್ಥಾನವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಪತ್ನಿ ಹೇಮಾವತಿ ವಿ. ಹೆಗ್ಗಡೆ ಅವರ ಕುಟುಂಬದೊಂದಿಗೆ ಸಂಬಂಧಿಸಿದೆ ಎಂಬುದು ವಿಶೇಷ.

ಪ್ರವಾಸಿಗರಿಗಾಗಿ ಮಾಹಿತಿ

ಅಂತರ:

ಮಂಗಳೂರು – 48 ಕಿ.ಮೀ.

ಕಾರ್ಕಳ – 23 ಕಿ.ಮೀ.ಮೂಡಬಿದ್ರೆ – 16 ಕಿ.ಮೀ.

ಬೆಂಗಳೂರು – 389 ಕಿ.ಮೀ.

ಪ್ರವಾಸ ಮಾರ್ಗ: ಬಸ್, ಅಥವಾ ಖಾಸಗಿ ವಾಹನಗಳಿಂದ ಸುಲಭವಾಗಿ ತಲುಪಬಹುದು.

ಅನುಭವ : ದೇಗುಲದ ದರ್ಶನದ ಜೊತೆಗೆ, ಬೆಟ್ಟ ಏರೋದು ಸಾಹಸಪ್ರಿಯರಿಗೆ ವಿಶೇಷ ಅನುಭವ ನೀಡುತ್ತದೆ. ನೈಸರ್ಗಿಕ ಹಸಿರು ಪರಿಸರ, ಹರಿಯುವ ಜಲಧಾರೆ, ಶಾಂತ ವಾತಾವರಣ – ಎಲ್ಲವೂ ಮನಸ್ಸಿಗೆ ನೆಮ್ಮದಿ ನೀಡುತ್ತವೆ.

ಇಟಲ ಸೋಮನಾಥೇಶ್ವರ ದೇವಾಸ್ಥಾನವು ಪೌರಾಣಿಕತೆ, ಭಕ್ತಿ ಮತ್ತು ಪ್ರಕೃತಿ ಒಂದೇ ವೇದಿಕೆಯಲ್ಲಿ ಬೆರೆತು ಕಂಡುಬರುವ ಅದ್ಭುತ ತಾಣ.


ಅಂಬರೀಶ ಮಹರ್ಷಿಯ ತಪಸ್ಸು, ಇಟ್ಟಿಲ ಎಲೆಯ ಮೇಲೆ ಪ್ರತಿಷ್ಠಾಪನೆಯಾದ ಸ್ವಪ್ರತಿಷ್ಠಿತ ಶಿವಲಿಂಗ, ಕಲ್ಲಾಗಿ ಮಾರ್ಪಟ್ಟ ಆನೆಯ ಪೌರಾಣಿಕತೆ, ಎಂದಿಗೂ ಬತ್ತದ ನೀರಿನ ಕುಂಡಗಳು, ಅಗ್ನಿ ಗಣಪತಿಯ ಅದ್ಭುತ ಸಾನಿಧ್ಯ – ಇವೆಲ್ಲವೂ ಈ ಸ್ಥಳವನ್ನು ತುಳುನಾಡಿನ ಅತ್ಯಂತ ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ತಾಣವನ್ನಾಗಿ ಮಾಡಿವೆ.

ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರೂ ಕೇವಲ ದೇವರ ದರ್ಶನ ಮಾತ್ರವಲ್ಲ, ಪ್ರಕೃತಿಯೊಂದಿಗಿನ ಸಮ್ಮಿಲನದ ಆಧ್ಯಾತ್ಮಿಕ ಅನುಭವವನ್ನೂ ಪಡೆದುಕೊಳ್ಳುತ್ತಾರೆ.

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 

    ಜೈ ತುಳುನಾಡ್‌






Comments

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ