ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"

 ನಮಸ್ಕಾರ,

ಪರಿಚಯ

ತುಳುನಾಡು – ಪರಶುರಾಮ ಸೃಷ್ಟಿಯೆಂದು ಕರೆಯಲ್ಪಡುವ ಈ ನೆಲವು, ತನ್ನ ನೈಸರ್ಗಿಕ ಸೌಂದರ್ಯದ ಜೊತೆಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳ ಮೂಲಕ ಭಾರತದ ಸಾಂಸ್ಕೃತಿಕ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಹಸಿರು ಕಾಡುಗಳು, ನದಿ, ಸಮುದ್ರ ತೀರಗಳು, ಬೆಟ್ಟಗಳು, ಕೃಷಿ ಜೀವನ ಮತ್ತು ಸಮೃದ್ಧ ಜನಪದ ಸಂಸ್ಕೃತಿ ತುಳುನಾಡಿನ ವೈಶಿಷ್ಟ್ಯ. ಇಲ್ಲಿ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಮತ್ತು ಕಂಬಳವು ಪ್ರಮುಖ ಸಾಂಸ್ಕೃತಿಕ ಅಂಶಗಳಾಗಿವೆ. ಅವುಗಳಲ್ಲಿ ವಿಶೇಷವಾಗಿ ಕಂಬಳ ತುಳುನಾಡಿನ ಹೆಮ್ಮೆ, ಜನರ ಭಾವನೆ, ರೈತರ ಹಬ್ಬ, ಮತ್ತು ಇಂದಿನ ಕಾಲದಲ್ಲಿ ಜಾಗತಿಕ ಮಟ್ಟದಲ್ಲಿಯೂ ಗುರುತಿಸಲ್ಪಟ್ಟ ಕ್ರೀಡೆಯಾಗಿದೆ.



1. ಕಂಬಳದ ಮೂಲ

ಕಂಬಳವು ಮೂಲತಃ ಕೃಷಿಕರ ಜೀವನಶೈಲಿಯಿಂದ ಹುಟ್ಟಿಕೊಂಡ ಕ್ರೀಡೆ. ಹಳೆಯ ಕಾಲದಲ್ಲಿ ರೈತರು ತಮ್ಮ ಹೊಲವನ್ನು ಸಮತಟ್ಟುಗೊಳಿಸಲು, ನೀರು ಸಮವಾಗಿ ಹರಿಯುವಂತೆ ಮಾಡಲು ಕೋಣಗಳ ಸಹಾಯದಿಂದ ಗದ್ದೆಗಳನ್ನು ಹದಗೊಳಿಸುತ್ತಿದ್ದರು. ಈ ಹಸನು ಕೆಲಸವೇ ನಿಧಾನವಾಗಿ ಕ್ರೀಡೆಯ ರೂಪವನ್ನು ಪಡೆದಿತು. ಹೀಗೆ, ರೈತರ ಪರಿಶ್ರಮ ಮತ್ತು ಉತ್ಸವದ ಮನೋಭಾವ ಒಂದಾಗಿ ಸೇರಿ ಕಂಬಳವನ್ನು ಜನಪ್ರಿಯ ಸಂಪ್ರದಾಯವನ್ನಾಗಿ ಮಾಡಿತು.

ಶಾಸನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳು ದೊರೆಯುತ್ತವೆ. ತಾಳಿಪಾಡಿ, ಶೃಂಗೇರಿ, ಕಲ್ಲುಮಾಗಣೆ ಮುಂತಾದ ಸ್ಥಳಗಳ ಶಾಸನಗಳಲ್ಲಿ ಕಂಬಳದ ಗದ್ದೆಗಳ ವಿಸ್ತೀರ್ಣ ಹಾಗೂ ಮಹತ್ವವನ್ನು ದಾಖಲಿಸಲಾಗಿದೆ. ಅಂದಿನ ಕಾಲದಲ್ಲಿ ಕಂಬಳದ ಗದ್ದೆಯ ದೊಡ್ಡತನವೇ ರೈತನ ಆದಾಯ ಮತ್ತು ಸಮಾಜದಲ್ಲಿ ಅವನ ಸ್ಥಾನಮಾನವನ್ನು ನಿರ್ಧರಿಸುತ್ತಿತ್ತು.



2. ಕೃಷಿ ಮತ್ತು ಕಂಬಳದ ಬಾಂಧವ್ಯ

ಸಾಂಪ್ರದಾಯಿಕ ಕಂಬಳವು ಕೇವಲ ಮನರಂಜನೆಗಾಗಿ ಅಲ್ಲ, ಅದು ಕೃಷಿಯ ಒಂದು ಅವಿಭಾಜ್ಯ ಭಾಗ.

⦁  ಸಣ್ಣ ರೈತರು ಸಾಮಾನ್ಯವಾಗಿ 1–2 ಎಕರೆಯ ಕಂಬಳ ಗದ್ದೆಗಳನ್ನು ಹೊಂದಿದ್ದರು.

⦁  ಗುತ್ತು ಕುಟುಂಬಗಳು ಅಥವಾ ದೊಡ್ಡ ಭೂಸ್ವಾಮಿಗಳು 30 ಎಕರೆಯವರೆಗೆ ಕಂಬಳ ಗದ್ದೆಗಳನ್ನು ಹೊಂದಿದ್ದರು.

ಕೃಷಿ ಹಬ್ಬದ ಭಾಗವಾಗಿ ಕೋಣಗಳನ್ನು ಉಳುಮೆಗಿಳಿಸಿ ಕಂಬಳ ನಡೆಸುವುದು ರೈತರಿಗೊಂದು ಆನಂದ ಮತ್ತು ಹೆಮ್ಮೆಯ ಸಂಗತಿ.





3. ಕಂಬಳದ ಹಬ್ಬದ ವಾತಾವರಣ

ಕಂಬಳ ಕೇವಲ ಕ್ರೀಡೆ ಅಲ್ಲ, ಅದು ಒಂದು ಜನಪದ ಉತ್ಸವ. ಊರಿನ ಜಾತ್ರೆಯಂತೆ ಸಾವಿರಾರು ಜನರು ಸೇರಿ ಸಂಭ್ರಮಿಸುತ್ತಾರೆ. ಹಿಂದಿನ ಕಾಲದಲ್ಲಿ ಒಂದು ದಿನ ಕಂಬಳ ನಡೆಯುವುದಾಗಿ ನಿಗದಿಯಾದರೆ ಆ ದಿನ ಊರಿನಲ್ಲಿ ಶುಭಕಾರ್ಯಗಳನ್ನು ನಡೆಸುತ್ತಿರಲಿಲ್ಲ. ಇದು ಕಂಬಳಕ್ಕೆ ದೊರೆತಿದ್ದ ಗೌರವವನ್ನು ತೋರಿಸುತ್ತದೆ.

ಮುಂಬೈ, ಬೆಂಗಳೂರು, ಮಂಗಳೂರು, ಉಡುಪಿ ಮುಂತಾದ ಕಡೆಗಳಿಂದಲೂ ಜನರು ಬರುತ್ತಾರೆ. ಕಂಬಳ ನಡೆಯುವಾಗ ಹಳ್ಳಿ ಮೇಳ, ಬಜಾರ್, ಆಟ-ಪಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ಸೇರಿ ಒಂದು ಅದ್ಭುತ ಉತ್ಸವದ ವಾತಾವರಣ ನಿರ್ಮಾಣವಾಗುತ್ತದೆ.



4. ಆಧುನಿಕ ಕಂಬಳದ ರೂಪಾಂತರ

1970ರ ದಶಕದಲ್ಲಿ ಕಾರ್ಕಳದ ಬಜಗೋಳಿ ಕಂಬಳವು ಕ್ರೀಡೆಯ ಹೊಸ ತಿರುವು ನೀಡಿತು. ಇಲ್ಲಿ ಮೊದಲು ಕೇವಲ ಕನೆಹಲಗೆ ಮತ್ತು ಹಗ್ಗ ವಿಭಾಗ ಮಾತ್ರ ಇದ್ದವು. ನಂತರ ಅಡ್ಡ ಹಲಗೆ ಮತ್ತು ನೇಗಿಲು ವಿಭಾಗ ಸೇರಿಸಲಾಯಿತು. ಹೀಗೆ ಕಂಬಳ ತನ್ನದೇ ಆದ ಸ್ಪರ್ಧಾತ್ಮಕ ರೂಪವನ್ನು ಪಡೆದು ಪ್ರೇಕ್ಷಕರನ್ನು ಇನ್ನಷ್ಟು ಆಕರ್ಷಿಸಿತು.

ಇಂದಿನ ಕಾಲದಲ್ಲಿ, ಕಂಬಳವು ಅರಸು ಕಂಬಳ, ದೈವದ ಕಂಬಳ, ಲವ–ಕುಶ ಕಂಬಳ ಮುಂತಾದ ವಿಭಿನ್ನ ಮಾದರಿಗಳಲ್ಲಿ ನಡೆಯುತ್ತಿದೆ. ವಿಜೇತರಿಗೆ ಬಂಗಾರದ ಬಹುಮಾನ, ಟ್ರೋಫಿ ಮುಂತಾದವುಗಳನ್ನು ನೀಡಲಾಗುತ್ತದೆ.

   

5. ಕೋಣಗಳ ಮಹತ್ವ

ಕಂಬಳದಲ್ಲಿ ಸ್ಪರ್ಧಿಸುವ ಕೋಣಗಳು ತುಳುನಾಡಿನ ಹೆಮ್ಮೆ.

⦁  ಅವುಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಲಾಗುತ್ತದೆ.

⦁  ಉತ್ತಮ ಆಹಾರ, ವೈದ್ಯಕೀಯ ಆರೈಕೆ, ವಿಶೇಷ ತರಬೇತಿ ನೀಡಲಾಗುತ್ತದೆ.

⦁  ಕೋಣಗಳ ಹೆಸರು, ಕೀರ್ತಿ ಜನರಲ್ಲಿ ದೊಡ್ಡ ಆಕರ್ಷಣೆಯಾಗುತ್ತದೆ.

ಇಲ್ಲಿ ಗೆಲುವು–ಸೋಲು ಮುಖ್ಯವಲ್ಲ, ಕೋಣಗಳನ್ನು ಉಳಿಸುವ ಅಭಿಮಾನವೇ ಮುಖ್ಯ. ಇದು ತುಳುನಾಡಿನ ಜನರ ಹೃದಯದಲ್ಲಿ ಕಂಬಳ ಎಷ್ಟು ಆಳವಾಗಿ ನೆಲೆಯೂರಿದೆ ಎಂಬುದನ್ನು ತೋರಿಸುತ್ತದೆ.


6. ನಿಷೇಧ ಮತ್ತು ಪುನರುತ್ಥಾನ

2014ರಲ್ಲಿ ಕಂಬಳವನ್ನು ಪ್ರಾಣಿಹಿಂಸೆ ಎನ್ನುವ ಕಾರಣದಿಂದ ನಿಷೇಧಿಸಲಾಯಿತು. ಆದರೆ, ಸ್ಥಳೀಯರ ಹೋರಾಟ, ಅಭಿಮಾನ ಮತ್ತು ಸಂಸ್ಕೃತಿಯನ್ನು ಉಳಿಸಬೇಕೆಂಬ ಹಠದಿಂದ 2017ರಲ್ಲಿ ಸರ್ಕಾರದಿಂದ ಮತ್ತೆ ಅನುಮತಿ ದೊರಕಿತು.

ಈ ಅವಧಿಯಲ್ಲಿಯೂ ಕೋಣಗಳನ್ನು ಪ್ರೀತಿಯಿಂದ ಸಾಕಿದ ಯಜಮಾನರು ತಮ್ಮ ಸಂಸ್ಕೃತಿಯ ಮೇಲೆ ಇರುವ ಬದ್ಧತೆಯನ್ನು ತೋರಿಸಿದರು. ಕಂಬಳವನ್ನು ನಿಷೇಧಿಸಿದರೂ ತುಳುನಾಡಿನ ಜನರ ಹೃದಯದಲ್ಲಿ ಅದರ ಪ್ರೀತಿ ಕಡಿಮೆಯಾಗಲಿಲ್ಲ.


7. ಬೆಂಗಳೂರಿನವರೆಗೂ ಕಾಲಿಟ್ಟ ಕಂಬಳ

ಇಂದು ಕಂಬಳ ಕೇವಲ ಕರಾವಳಿ ಭಾಗದಲ್ಲಿ ಮಾತ್ರವಲ್ಲ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಪ್ರದರ್ಶನಗೊಂಡಿದೆ. ಇದು ಕಂಬಳದ ಜನಪ್ರಿಯತೆ ಎಷ್ಟು ಎತ್ತರವನ್ನು ಮುಟ್ಟಿದೆ ಎಂಬುದಕ್ಕೆ ಸಾಕ್ಷಿ. ರಾಜ್ಯ ರಾಜಧಾನಿಯಲ್ಲಿ ನಡೆದ ಕಂಬಳವು ತುಳುನಾಡಿನ ಜನರಿಗೆ ಹೆಮ್ಮೆಯನ್ನು ತಂದಿದೆ.



8. ಇಂದಿನ ಕಾಲದ ಕಂಬಳ

ಪ್ರಸ್ತುತ ಸುಮಾರು 24 ಆಧುನಿಕ ಕಂಬಳಗಳು ನಡೆಯುತ್ತಿವೆ.

ಜೊತೆಗೆ ಹಲವು ಸಾಂಪ್ರದಾಯಿಕ ಕಂಬಳಗಳು ಸಹ ಇವೆ.

ಕುಂದಾಪುರದ ಕಡೆ ನಡೆಯುವ ಕಂಬಳಗಳು ವಿಭಿನ್ನ ಶೈಲಿಯನ್ನು ತೋರಿಸುತ್ತವೆ.

ನೇರ ಪ್ರಸಾರ (Live Telecast) ಮೂಲಕ ಈಗ ಕಂಬಳವನ್ನು ಜಗತ್ತಿನಾದ್ಯಂತ ನೋಡಬಹುದಾಗಿದೆ.

ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ – ತುಳುನಾಡಿನ ಜನರ ಪ್ರೀತಿ, ದೈವದೇವರ ಆಶೀರ್ವಾದ ಮತ್ತು ಸಂಸ್ಕೃತಿಯ ಬಲ.
ಸಾರಾಂಶ

ಕಂಬಳವು ಕೇವಲ ಒಂದು ಕ್ರೀಡೆ ಅಲ್ಲ. ಅದು ತುಳುನಾಡಿನ ಆತ್ಮ, ರೈತರ ಹೆಮ್ಮೆ, ಸಂಸ್ಕೃತಿಯ ಸಂಕೇತ. ಕಾಲ ಬದಲಾದರೂ, ಆಧುನಿಕತೆ ಬಂದರೂ ಕಂಬಳದ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಇದು ತುಳುನಾಡಿನ ಜನರ ಒಗ್ಗಟ್ಟು ಮತ್ತು ಸಂಸ್ಕೃತಿಯ ಬಲವನ್ನು ತೋರಿಸುತ್ತದೆ.

 
                                                                                                                  ನಮ್ಮ ಸಂಸ್ಕ್ರತಿ  ನಮ್ಮ ಹೆಮ್ಮೆ 
                                                                                                                           ಜೈ ತುಳುನಾಡ್
   








  
 
 







Comments

Post a Comment

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ